ಕೃಷಿಗೆ ಪಾಲಿಹೌಸ್ ಎಂಬ ಹೈಟೆಕ್ ಸ್ಪರ್ಶ Polyhouse
ಬೂದಿಕೋಟೆ: ಬಂಗಾರಪೇಟೆ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ಈಗ ಆಧುನಿಕ ಕೃಷಿಯತ್ತ ಮುಖ ಮಾಡುತ್ತಿದ್ದಾರೆ. ವಿಶೇಷವಾಗಿ ಪಾಲಿಹೌಸ್ ಒಳಗಡೆ ತರಕಾರಿ ಬೆಳೆಯುವ ಪದ್ಧತಿ ಅಲವಡಿಸಿಕೊಳ್ಳುತ್ತಿದ್ದಾರೆ.Polyhouse
ಹವಾಮಾನ ವೈಪರಿತ್ಯ, ಮಳೆ ಕೊರತೆ ಮತ್ತು ಕಾಡುಪ್ರಾಣಿಗಳ ಹಾವಳಿ ಮುಂತಾದ ಸಮಸ್ಯೆಗಳ ನಡುವೆಯೂ ರೈತರು ಈ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಕೃಷಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸುತ್ತಿದ್ದಾರೆ.
ಟೊಮ್ಯಾಟೊ, ಕ್ಯಾಪ್ಸಿಕಂ, ಸೌತೆಕಾಯಿ, ಬೀನ್ಸ್, ಚಂಡು ಹೂ, ಹಾಗಲಕಾಯಿ ಸೇರಿದಂತೆ ಹಲವು ತರಕಾರಿ ಬೆಳೆಯಲಾಗುತ್ತಿದೆ.
ಪಾಲಿಹೌಸ್ನಿಂದ ನೀರಿನ ಬಳಕೆ ಕಡಿಮೆ ಆಗುತ್ತದೆ. ಬೆಳೆಗಳಿಗೆ ಸೂಕ್ತ ತಾಪಮಾನ ಮತ್ತು ರಕ್ಷಣೆ ದೊರೆಯುತ್ತದೆ. ಇದರಿಂದ ಗುಣಮಟ್ಟದ ಉತ್ಪನ್ನ ಸಿಗುತ್ತಿದ್ದು, ಮಾರುಕಟ್ಟೆಯಲ್ಲಿ ಹೆಚ್ಚು ಬೆಲೆ ದೊರೆಯುತ್ತಿದೆ. ಹೊರಗಿನ ಬೆಳೆಗಿಂತ ಪಾಲಿಹೌಸ್ನಲ್ಲಿ ಬೆಳೆದ ತರಕಾರಿಗೆ ಹಾನಿ ಕಡಿಮೆ, ಆದಾಯ ಹೆಚ್ಚು ಎಂದು ರೈತರು ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಹಲವಾರು ರೈತರು ಪಾಲಿಹೌಸ್ ವ್ಯವಸ್ಥೆ ಅಳವಡಿಸಿಕೊಂಡು ತರಕಾರಿ ಹಾಗೂ ಹೂವಿನ ಬೆಳೆ ಬೆಳೆಸುತ್ತಿದ್ದಾರೆ.
ಪಾಲಿಹೌಸ್ನಲ್ಲಿ ಬೆಳೆ ಮಾಡುವುದರಿಂದ ಕೀಟನಾಶಕ ನಿಯಂತ್ರಣದಲ್ಲಿ ಇರುತ್ತದೆ. ಇದರಿಂದ ಖರ್ಚು ಕಡಿಮೆಯಾಗುತ್ತಿದ್ದು, ಲಾಭದ ಪ್ರಮಾಣ ಹೆಚ್ಚುತ್ತಿದೆ. ಕೆಲ ರೈತರ ಪ್ರಕಾರ, ಬೆಳಗ್ಗೆ ತಾಜಾ ತರಕಾರಿಗಳನ್ನು ಮಾರಾಟಕ್ಕೆ ತೆಗೆದುಕೊಂಡು ಹೋದರೆ ಮಧ್ಯವರ್ತಿಗಳಿಂದಲೂ ಉತ್ತಮ ಬೆಲೆ ಸಿಗುತ್ತದೆ. ಪಾಲಿಹೌಸ್ನಲ್ಲಿ ಬೆಳೆ ಬೆಳೆದರೆ ಹವಾಮಾನ ಸಮಸ್ಯೆಗಳೂ ಕಡಿಮೆ ಎಂದು ತಿಳಿಸಿದರು.
ಹಿಂದೆ ಬಯಲಿನಲ್ಲಿ ತರಕಾರಿ ಬೆಳೆದಾಗ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸೇಲಾಗುತ್ತಿತ್ತು. ಕಾಡುಪ್ರಾಣಿಗಳಿಂದ ಬೆಳೆ ನಷ್ಟ್ಟವಾಗುತ್ತಿತ್ತು. ಈಗ ಪಾಲಿಹೌಸ್ ಒಳಗಡೆ ಬೆಳೆದ ನಂತರ ಬೆಳೆ ಉತ್ತಮವಾಗಿ ಬರುತ್ತಿದೆ. ನೀರು ಕೂಡ ಕಡಿಮೆ ಬಳಕೆ ಆಗುತ್ತಿದೆ. ಆದಾಯ ಹೆಚ್ಚಾಗಿದೆ. ಸರ್ಕಾರ ಇನ್ನಷ್ಟು ಸಹಾಯ ಮಾಡಿದರೆ ನಮ್ಮಂತ ರೈತರಿಗೆ ತುಂಬಾ ಉಪಯೋಗವಾಗುತ್ತದೆ.