ಜಾಣಗೆರೆ ವೆಂಕಟರಾಮಯ್ಯ ಅವರ ಆತ್ಮಕಥನ ‘ಅರ್ಥವಾಗದ ಲೋಕ’ ಬಿಡುಗಡೆ 
ರಾಜ್ಯ

ಜನಪ್ರತಿನಿಧಿಗಳು ತಾಯಿಯ ಅಂತಃಕರಣ ಹೊಂದಿರಬೇಕು - ಸಾಹಿತಿ ಎಸ್.ಜಿ. ಸಿದ್ದರಾಮಯ್ಯ

ಬೆಂಗಳೂರು: ಜಗತ್ತಿನ ವಿನಾಶ ನೋಡುತ್ತಿದ್ದರೆ ಕರಳು ಹಿಂಡುತ್ತದೆ. ಇಂತಹ ದುಷ್ಕೃತ್ಯ ಕಡಿಮೆಯಾಗಲು, ಸಮಾಜದಲ್ಲಿ ಶಾಂತಿ ನೆಲೆಸಲು ಜನಪ್ರತಿನಿಧಿಗಳು ತಾಯಿಯ ಅಂತಃಕರಣ ಹೊಂದಿರಬೇಕು. ಆಗ ಅಮಾಯಕರ ಮಾರಣ ಹೋಮ ನಿಲ್ಲಲಿದೆ ಎಂದು ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಜಾಣಗೆರೆ ಪತ್ರಿಕೆ ಪ್ರಕಾಶನ ಹಾಗೂ ಕಿರಂ ಪ್ರಕಾಶನ ಸಹಯೋಗದಲ್ಲಿ ನಗರದ ಗಾಂಧಿ ಭವನದ ಬಾಪು ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಾಣಗೆರೆ ವೆಂಕಟರಾಮಯ್ಯ ಅವರ ಆತ್ಮಕಥನ ‘ಅರ್ಥವಾಗದ ಲೋಕ’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಜಗತ್ತು ಆತ್ಮವಿಮರ್ಶೆ ಪ್ರಜ್ಞೆಯ ಮೂಲಕ ಅಂಹಿಸೆಯನ್ನು ರೂಢಿಸಿಕೊಳ್ಳುವಂತಾಗಬೇಕು. ಅದಕ್ಕೂ ಮೊದಲು ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳಬೇಕು. ಆ ಮೂಲಕ ಲೋಕವನ್ನು ವಿಮರ್ಶಿಸುವ ನೈತಿಕ ಎಚ್ಚರ ಹೊಂದಬಹುದಾಗಿದೆ. ಜಾಣಗೆರೆ ವೆಂಟಕರಾಮಯ್ಯ ಅವರು ಒಳವಿಮರ್ಶೆಯ ಪ್ರಜ್ಞೆಯನ್ನು ಮೈಗೊಡಿಸಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಗಾಂಧಿ ಸ್ಮಾರಕ ನಿಧಿಯ ಗೌರವ ಕಾರ್ಯದರ್ಶಿ ವೂಡೇ ಪಿ. ಕೃಷ್ಣ ಮಾತನಾಡಿ, ಜಾಣಗೆರೆ ವೆಂಕಟರಾಮಯ್ಯ ಅಂತಹವರ ಚಿಂತನಾ ನಾಯಕತ್ವ ಈ ನಾಡಿಗೆ ಅಗತ್ಯ. ಅವರು ನಾಡುನುಡಿ ಪರವಾದ ಹೋರಾಟ ನಡೆಸುತ್ತಾ ಬಂದಿದ್ದಾರೆ. ಹಿಂದಿ ಹೇರಿಕೆ ವಿರುದ್ಧವೂ ಹೋರಾಟ ನಡೆಸಿದ್ದರು. ಸಂವಿಧಾನದಡಿ ಹಿಂದಿ ಕೂಡ ಕನ್ನಡದಂತೆ ಒಂದು ಭಾಷೆ. ಹೆಚ್ಚು ಜನ ಈ ಭಾಷೆಯನ್ನು ಮಾತನಾಡುತ್ತಾರೆ ಎಂಬ ಕಾರಣಕ್ಕೆ ರಾಷ್ಟ್ರ ಭಾಷೆ ಎನ್ನಲು ಸಾಧ್ಯವಿಲ್ಲ. ತಮಿಳು ಭಾಷಿಗರಂತೆ ಕನ್ನಡಿಗರು ನಮ್ಮ ಅಸ್ಮಿತೆ ಉಳಿಸಿಕೊಳ್ಳಬೇಕು, ಮಾತೃ ಭಾಷಾ ಪ್ರೇಮ ಮೆರೆಯಬೇಕು ಎಂದು ಹೇಳಿದರು.
ಸಾಹಿತಿ ಬಂಜಗೆರೆ ಜಯಪ್ರಕಾಶ್ ಮಾತನಾಡಿ, ಜಾಣಗೆರೆ ವೆಂಕಟರಾಮಯ್ಯ ಅವರು ತಮ್ಮನ್ನು ತಾವು ಯಾರಿಗೂ ಮಾರಿಕೊಳ್ಳದ, ಯಾರೊಂದಿಗೂ ರಾಜಿಯಾಗದ ಹೋರಾಟಗಾರ. ಅವರು ಲಾಬಿಗೆ ಒಳಗಾಗಲಿಲ್ಲ ಎಂದು ಅವರ ವ್ಯಕ್ತಿತ್ವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತಿ ಹಂಪ ನಾಗರಾಜಯ್ಯ ಅವರು ಜಾಣಗೆರೆ ವೆಂಕಟರಾಮಯ್ಯ ಅವರ ಜತೆಗಿನ ಒಡನಾಟವನ್ನು ಸ್ಮರಿಸಿಕೊಂಡರು. ರಂಗಕರ್ಮಿ ಆರ್. ವೆಂಕಟರಾಜು ಇತರರು ಇದ್ದರು.

ಈ ಲೋಕ ಯಾರಿಂದ, ಏಕೆ, ಹೇಗೆ ಸೃಷ್ಟಿಯಅಯಿತು ಎಂಬುದು ಸೇರಿ ಹಲವು ಸಂಗತಿಗಳು ಇಂದಿಗೂ ಅರ್ಥವಾಗಿಲ್ಲ. 75 ವರ್ಷ ದಾಟಿದ್ದರಿಂದ ಕೆಲವು ಘಟನೆ, ವಿಚಾರ ಮರೆಯುತ್ತಿದ್ದೇನೆ. ಈ ಕಾರಣಕ್ಕೆ ಆತ್ಮಕಥೆ ಬರೆದಿರುವೆ.