ಬೆಂಗಳೂರು: ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಅಕಾಲಿಕ ನಿಧನಕ್ಕೆ ತೀವ್ರ ದಿಗ್ಭ್ರಮೆ ವ್ಯಕ್ತಪಡಿಸಿರುವ ಕರ್ನಾಟಕದ DCM ಡಿ.ಕೆ. ಶಿವಕುಮಾರ್, ರಾಜಕೀಯ ನಾಯಕರು ತಮ್ಮ ಸಂಚಾರ ಮತ್ತು ಸುರಕ್ಷತೆಯ ವಿಷಯದಲ್ಲಿ ಹೆಚ್ಚಿನ ಜಾಗರೂಕತೆ ವಹಿಸಬೇಕು ಎಂದಿದ್ದಾರೆ.
ಬುಧವಾರ ಸದಾಶಿವನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಜಿತ್ ಪವಾರ್ ಅವರ ಸಾವಿನ ಸುದ್ದಿ ಕೇಳಿ ತಮಗೆ ತೀವ್ರ ಆಘಾತವಾಗಿದೆ ಎಂದರು. ಅಜಿತ್ ಪವಾರ್ ಅವರ ಸಾವು ನಂಬಲಸಾಧ್ಯ. ನಾವು ರಾಜಕಾರಣಿಗಳಾದವರು ಸದಾ ಸಾರ್ವಜನಿಕ ಜೀವನದಲ್ಲಿರುತ್ತೇವೆ ಮತ್ತು ನಿರಂತರ ಪ್ರಯಾಣದಲ್ಲಿರುತ್ತೇವೆ. ಇಂತಹ ಸಂದರ್ಭಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಇದೆ. ಈ ಹಿಂದೆ ಕೂಡ ನಾವು ಇಂತಹದೇ ಅಪಘಾತಗಳಲ್ಲಿ ಹಲವು ಪ್ರಭಾವಿ ನಾಯಕರನ್ನು ಕಳೆದುಕೊಂಡಿದ್ದೇವೆ. ಸಂಚಾರದ ವೇಳೆ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು" ಎಂದು ಡಿ.ಕೆ. ಶಿವಕುಮಾರ್ ಎಚ್ಚರಿಸಿದರು.
ಪ್ರಗತಿಪರ ಚಿಂತನೆಯ ನಾಯಕನಿಗೆ ವಿದಾಯ
ಅಜಿತ್ ಪವಾರ್ ಅವರ ವ್ಯಕ್ತಿತ್ವವನ್ನು ಸ್ಮರಿಸಿದ ಡಿಸಿಎಂ, "ಅವರು ಅತ್ಯಂತ ಪ್ರಗತಿಪರ ಆಲೋಚನೆಗಳನ್ನು ಹೊಂದಿದ್ದ ನಾಯಕ. ಮಹಾರಾಷ್ಟ್ರದ ಅಭಿವೃದ್ಧಿಯಲ್ಲಿ ಅವರ ಪಾತ್ರ ದೊಡ್ಡದಿದೆ. ಮೊನ್ನೆಯಷ್ಟೇ ಅಲ್ಲಿನ ಮುಖ್ಯಮಂತ್ರಿಗಳು ಪವಾರ್ ಅವರ ಸಹಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಕುಟುಂಬಕ್ಕೆ ಬೆಂಗಳೂರಿನೊಂದಿಗೂ ನಿಕಟ ಸಂಬಂಧವಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ," ಎಂದು ಶ್ರದ್ಧಾಂಜಲಿ ಸಲ್ಲಿಸಿದರು. ವಿಮಾನ ಅಥವಾ ಹೆಲಿಕಾಪ್ಟರ್ ತಾಂತ್ರಿಕ ದೋಷದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ವರದಿ ಬಂದ ನಂತರವಷ್ಟೇ ಪ್ರತಿಕ್ರಿಯಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯ ರಾಜಕಾರಣದ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಡಿ.ಕೆ. ಶಿವಕುಮಾರ್, ಸಚಿವ ಆರ್.ಬಿ. ತಿಮ್ಮಾಪುರ ಅವರ ರಾಜೀನಾಮೆಗೆ ವಿರೋಧ ಪಕ್ಷಗಳು ಒತ್ತಾಯಿಸುತ್ತಿರುವುದನ್ನು ತೀವ್ರವಾಗಿ ಖಂಡಿಸಿದರು.
"ಸಚಿವ ತಿಮ್ಮಾಪುರ ಅವರಿಗೂ ಪ್ರಸ್ತುತ ಕೇಳಿಬರುತ್ತಿರುವ ವಿವಾದಕ್ಕೂ ಯಾವುದೇ ನೇರ ಸಂಬಂಧವಿಲ್ಲ. ವಿರೋಧ ಪಕ್ಷಗಳು ಸಣ್ಣ ವಿಷಯವನ್ನು ದೊಡ್ಡದು ಮಾಡಿ ಉತ್ಪ್ರೇಕ್ಷೆ ಮಾಡುತ್ತಿವೆ. ಸರ್ಕಾರದ ಮೇಲೆ ಗೂಬೆ ಕೂರಿಸಲು ಅವರು ನಡೆಸುತ್ತಿರುವ ರಾಜಕೀಯ ಷಡ್ಯಂತ್ರ ಇದಾಗಿದೆ," ಎಂದು ಅವರು ಕಿಡಿಕಾರಿದರು.
ಮುಖ್ಯಮಂತ್ರಿಗಳೊಂದಿಗೆ ಚರ್ಚೆ
ಈ ಪ್ರಕರಣದ ಕುರಿತು ತಾವು ಈಗಾಗಲೇ ಗಮನ ಹರಿಸುತ್ತಿದ್ದು, ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಸಮಾಲೋಚನೆ ನಡೆಸುವುದಾಗಿ ತಿಳಿಸಿದರು. "ಈ ಬಗ್ಗೆ ನಾನು ಮೊದಲು ಸಂಪೂರ್ಣ ವಿವರಗಳನ್ನು ಪಡೆದುಕೊಳ್ಳುತ್ತೇನೆ, ನಂತರ ಸಿಎಂ ಜೊತೆ ಮಾತನಾಡಿ ಸರ್ಕಾರದ ನಿಲುವನ್ನು ಸ್ಪಷ್ಟಪಡಿಸುತ್ತೇನೆ. ವಿನಾಕಾರಣ ಸಚಿವರ ತೇಜೋವಧೆ ಮಾಡುವುದನ್ನು ಸಹಿಸುವುದಿಲ್ಲ," ಎಂದು ಡಿಸಿಎಂ ಸ್ಪಷ್ಟಪಡಿಸಿದರು.