ಯಾದಗಿರಿಯಲ್ಲಿ ಜು.28ರಿಂದ ಹಮ್ಮಿಕೊಂಡ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮದ ಮಾಹಿತಿ ಭಿತ್ತಿಪತ್ರವನ್ನು ಡಿಎಚ್ಇ ಡಾ.ಮಹೇಶ ಬಿರಾದಾರ ಗುರುವಾರ ಬಿಡುಗಡೆ ಮಾಡಿದರು. ಡಾ.ಮಲ್ಲಪ್ಪ ನಾಯ್ಕಲ್, ಜಗನ್ನಾಥ ಕೋಟೆ ಇತರರಿದ್ದರು.
- ಡಿಎಚ್ಒ ಡಾ.ಮಹೇಶ ಬಿರಾದಾರ ಮಾಹಿತಿ
- ಜು.28ರಿಂದ ಎರಡು ಹಂತದಲ್ಲಿ ಕಾರ್ಯಕ್ರಮ
ಯಾದಗಿರಿ: ಪೋಲಿಯೋಮುಕ್ತ ಜಿಲ್ಲೆಯನ್ನಾಗಿಸಲು ಪಣತೊಟ್ಟಿರುವ ಆರೋಗ್ಯ ಇಲಾಖೆ ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಎರಡು ಹಂತದಲ್ಲಿ ನಾಲ್ಕು ದಿನಗಳ ಕಾಲ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ ಬಿರಾದಾರ ತಿಳಿಸಿದರು.
ಗುರುವಾರ ಡಿಎಚ್ಒ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜು.28ರಂದು ಜಿಲ್ಲೆಯ ಎಲ್ಲೆಡೆ ರಚಿಸಲಾದ 665 ಕೇಂದ್ರಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲಾಗುವುದು. ನಂತರ ಜು.29ರಿಂದ ಜು.1ರವರೆಗೂ ಜಿಲ್ಲೆಯ ಮನೆ, ಮನೆಗೂ ತೆರಳಿ ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಪೋಲಿಯೋ ಹನಿ ಹಾಕಲಾಗುವುದು ಎಂದರು.
ಜಿಲ್ಲೆಯಲ್ಲಿರುವ ಒಟ್ಟು 2.47,507 ಮನೆಗಳಲ್ಲಿ 13,75,679 ಲಕ್ಷ ಜನಸಂಖ್ಯೆಯಿದ್ದು, ಇದರಲ್ಲಿ 1,66,928 ಐದು ವರ್ಷದೊಳಗಿನ ಮಕ್ಕಳಿದ್ದಾರೆ. ಮನೆ ಭೇಟಿ ತಂಡ, ಟ್ರಾಂಜಿಟಿ ತಂಡ ಮತ್ತು ಸಂಚಾರಿ ತಂಡ ಹೀಗೆ ವಿವಿಧ ರೀತಿಯ ಮೂರು ತಂಡ ರಚಿಸಲಾಗಿದೆ. ಒಟ್ಟು 704 ಸಿಬ್ಬಂದಿ ಈ ಕಾರ್ಯಕ್ರಮದಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಇವರ ಜತೆಯಲ್ಲಿ 134 ಮೇಲ್ವಿಚಾರಕು ಮತ್ತು 1391 ಜನರು ಲಸಿಕೆ ಹಾಕುವವರಿದ್ದು, ಯಾವುದೇ ಕಾರಣಕ್ಕೂ ಒಂದು ಮಗು ಕೂಡ ಇದರಿಂದ ವಂಚತರಾಗದಂತೆ ಎಚ್ಚರ ವಹಿಸಿ ಕಾರ್ಯಕ್ರಮ ಯಶಸ್ಸು ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಆರ್ಸಿಎಚ್ ಅಧಿಕಾರಿ ಡಾ.ಮಲ್ಲಪ್ಪ ಮಾತನಾಡಿ, ಕಳೆದ ಹದಿನಾಲ್ಕು ವರ್ಷಗಳಿಂದ ಭಾರತ ಪೋಲಿಯೋಮುಕ್ತ ದೇಶವನ್ನಾಗಿದೆ. ಆದರೇ ಪಕ್ಕದ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳಲ್ಲಿ ಇದು ಕಾಣಿಸಿಕೊಂಡಿದ್ದರಿಂದ ಅಲ್ಲಿನವರು ಇಲ್ಲಿಗೆ ಬಂದು ಹೋಗುವುದು ಮಾಡುವುದರಿಂದ ಇದು ಮತ್ತೆ ಇಲ್ಲಿ ಹರಡಬಹುದೆಂಬ ಮುಂದಾಲೋಚನೆಯಿಂದ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು. ಆರೋಗ್ಯ ಶಿಕ್ಷಣ ಅಧಿಕಾರಿ ಜಗನ್ನಾಥ ಕೋಟೆ, ಆರ್ ಸಿಎಚ್ ಕಚೇರಿ ಅಧಿಕಾರಿ ಸಿಬ್ಬಂದಿ ಇದ್ದರು.