ಪಿರಿಯಾಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಡೆದ ಪೋಲಿಯೋ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಮಗುವಿಗೆ ಪೋಲಿಯೋ ಹನಿ ಹಾಕುವ ಮೂಲಕ ಚಾಲನೆ ನೀಡಿದರು. ಕೆ.ರಮೇಶ್, ಡಾ.ವಿಜಯಕುಮಾರ್, ಡಾ.ಶಶಿಧರ್, ಡಾ.ಸುನಿಲ್, ಪಿ.ಪಿ.ಲತಾ, ಕೆ.ಆರ್.ಪ್ರಕಾಶ್ ಇತರರು ಇದ್ದಾರೆ. 
ರಾಜ್ಯ

ಪಿ.ಪಟ್ಟಣ ತಾಲೂಕಿನಲ್ಲಿ 18074 ಮಕ್ಕಳಿಗೆ ಪೋಲಿಯೋ ಹನಿ ಗುರಿ

ಪಿರಿಯಾಪಟ್ಟಣ: ವಿಶ್ವದಲ್ಲಿ ಪೋಲಿಯೋವನ್ನು ಸಂಪೂರ್ಣ ತೊಡೆದು ಹಾಕುವುದು ನಮ್ಮೆಲ್ಲರ ಗುರಿಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಶ್ರೀನಿವಾಸ್ ಹೇಳಿದರು.

ಪೋಲಿಯೋ ಲಸಿಕಾ ಅಭಿಯಾನದ ಅಂಗವಾಗಿ ಭಾನುವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪೋಲಿಯೋ ಲಸಿಕಾ ಅಭಿಯಾನ ಮೂರು ದಿನಗಳ ಕಾಲ ನಡೆಯಲಿದ್ದು, ತಾಲೂಕಿನಲ್ಲಿ 18074 ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ. ತಾಲೂಕಿನಲ್ಲಿ ಒಟ್ಟು 156 ಕೇಂದ್ರಗಳನ್ನು ತೆರೆಯಲಾಗಿದ್ದು, 344 ಅಂಗನವಾಡಿ ಕಾರ್ಯಕರ್ತೆಯರು, 178 ಆಶಾ ಕಾರ್ಯಕರ್ತೆಯರು ಮತ್ತು 84 ಆರೋಗ್ಯ ಇಲಾಖೆ ಸಿಬ್ಬಂದಿ ಈ ಕಾರ್ಯಕ್ರಮಕ್ಕೆ ನಿಯೋಜನೆಗೊಂಡಿದ್ದಾರೆ. ಮೊದಲ ದಿನ ಪೋಲಿಯೋ ಲಸಿಕೆ ಪಡೆಯಲು ಸಾಧ್ಯವಾದ ಮಕ್ಕಳನ್ನು ಗುರುತಿಸಿ ನಂತರದ ಎರಡು ದಿನಗಳಲ್ಲಿ ಮನೆ ಮನೆಗೆ ತೆರಳಿ ಪೋಲಿಯೋ ಹನಿ ಹಾಕಲಾಗುತ್ತಿದೆ ಎಂದರು.

ರೋಟರಿ ವಲಯ 6 ರ ಜೋನಲ್ ಲೆಫ್ಟಿನೆಂಟ್ ಕೆ.ರಮೇಶ್ ಮಾತನಾಡಿ, ವಿಶ್ವದಾದ್ಯಂತ ಪೋಲಿಯೋ ತಡೆಗಟ್ಟುವಲ್ಲಿ ರೋಟರಿ ಸಂಸ್ಥೆಯ ಪಾತ್ರ ಮಹತ್ವದ್ದಾಗಿದ್ದು, ಪ್ರತಿ ವರ್ಷವೂ ಲಸಿಕಾ ಅಭಿಯಾನಕ್ಕೆ ಅಗತ್ಯವಿರುವ ಪರಿಕರಗಳನ್ನು ಪೂರೈಸುತ್ತಾ ಬಂದಿದೆ ಎಂದರು.

ರೋಟರಿಯು ಪೋಲಿಯೋ ಲಸಿಕಾ ಅಭಿಯಾನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ ಎಂದರು. ಈ ಸಂದರ್ಭದಲ್ಲಿ ರೋಟರಿ ಐಕಾನ್ಸ್ ಸಂಸ್ಥೆ ಮಾಜಿ ಕಾರ್ಯದರ್ಶಿ ಪಿ.ಎಸ್.ಹರೀಶ್, ರೋಟರಿ ವಲಯ 6 ರ ನಿಯೋಜಿತ ಪ್ರಾಂತಪಾಲ ಸಿ.ಎನ್.ವಿಜಯ್, ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ವಿಜಯಕುಮಾರ್, ಮಕ್ಕಳ ತಜ್ಞ ಡಾ.ಶಶಿಧರ್, ವೈದ್ಯರಾದ ಡಾ.ಸುನಿಲ್, ಆರೋಗ್ಯ ನಿರೀಕ್ಷಕ ಕೆ.ಆರ್.ಪ್ರಕಾಶ್, ಆರೋಗ್ಯ ಶಿಕ್ಷಣಾಧಿಕಾರಿ ಪಿ.ಪಿ.ಲತಾ, ನವೀನ್, ಅನಿಲ್, ಸಾರ್ವಜನಿಕ ಆಸ್ಪತ್ರೆ ಮೇಲ್ವಿಚಾರಕ ಫೆಲ್ಸಿ ಇತರರು ಇದ್ದರು.