ಬೆಂಗಳೂರು: ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಬಂಡವಾಳ ಹೂಡಿಕೆಗೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಪಾಲುದಾರರ ಜತೆ ಚರ್ಚಿಸಿ ನೀತಿ ರೂಪಿಸುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
‘ಬ್ರ್ಯಾಂಡ್ ಬೆಂಗಳೂರು’ ಪರಿಕಲ್ಪನೆಯಿಂದ ಹಿಡಿದು ಹವಾಮಾನ ಬದಲಾವಣೆ ಮತ್ತು ಮೂಲಸೌಕರ್ಯ ಅಭಿವೃದ್ಧಿವರೆಗಿನ ವಿವಿಧ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಸುವ ಉದ್ದೇಶದಿಂದ ಇಂಟಿಗ್ರೇಟೆಡ್ ವರ್ಕ್ ಸ್ಪೇಸಸ್ ಫೋರಂ ಸಿಸಿಐಆರ್‌ಇ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಬೆಂಗಳೂರು ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿ’ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮುದಾಯ, ನಾಗರಿಕರು, ಸಾಂಸ್ಥಿಕ ವಲಯ ಮತ್ತು ಕೈಗಾರಿಕಾ ಕ್ಷೇತ್ರದ ಜತೆ ಸರ್ಕಾರ ನಿರಂತರವಾಗಿ ಸಂವಾದ ನಡೆಸುತ್ತಿದೆ. ಪ್ರತಿಯೊಬ್ಬರನ್ನೂ ಸರ್ಕಾರ ತನ್ನ ಪಾಲುದಾರರು ಎಂದು ಭಾವಿಸಿದೆ. ಎಲ್ಲ ಅಭಿಪ್ರಾಯಗಳನ್ನು ಆಲಿಸಿ ನಂತರ ನೀತಿ ನಿರೂಪಣೆಗೆ ಆದ್ಯತೆ ನೀಡಲಾಗುವುದು. ಸಂಚಾರ ಸಿಕ್ಕು ನಿವಾರಣೆಗೆ ದೈನಂದಿನ ಸಂಚಾರ ವ್ಯವಸ್ಥೆ ಮಾಹಿತಿ ಪಡೆದುಕೊಳ್ಳುವುದು ಅಗತ್ಯ ಎಂದರು.
ಸಿಸಿಐಆರ್‌ಇ ಸಂಸ್ಥಾಪಕ ಜಯರಾಮ್ ಮಾತನಾಡಿ, ಉದ್ಯಮದ ಮುಂಚೂಣಿ ನಾಯಕರು ಒಂದೇ ವೇದಿಕೆಯಲ್ಲಿ ಸೇರಿ ಭವಿಷ್ಯದ ಕಾರ್ಯಯೋಜನೆಗಳು, ನಗರ ಮೂಲಸೌಕರ್ಯ ಸಂಬಂಧಿಸಿದ ಮಹತ್ವದ ಕಾರ್ಯತಂತ್ರಗಳ ಕುರಿತು ಚರ್ಚಿಸಿದ್ದೇವೆ. ಇದು ಚರ್ಚೆಗಷ್ಟೇ ಸೀಮಿತವಾಗದೆ, ಕಾರ್ಯರೂಪಕ್ಕೆ ತರಲು ಒತ್ತು ನೀಡುತ್ತಿದ್ದೇವೆ. ಆಡಳಿತದಲ್ಲಿ ಕೃತಕ ಬುದ್ಧಿಮತ್ತೆ ಅಳವಡಿಕೆ, ತಂತ್ರಜ್ಞಾನ ಆಧಾರಿತ ಮಾದರಿ, ನಗರ ಸಂಚಾರ ಸಮಸ್ಯೆಗಳು, ಸ್ಮಾರ್ಟ್ ಕಟ್ಟಡಗಳ ಆರ್ಥಿಕ ಮಾದರಿಗಳು ಕುರಿತು ಚರ್ಚಿಸಲಾಗಿದೆ ಎಂದರು. ಭಾರತೀಯ ಸಿಟಿ ಸಿಇಒ ಎಂ.ಶ್ರೀರಾಮ್ ಮತ್ತಿತರರಿದ್ದರು.
ಬೆಂಗಳೂರು ನಗರ ತ್ವರಿತವಾಗಿ ಬೆಳವಣಿಗೆಯಾಗುತ್ತಿದ್ದು, ನಗರದ ಜನಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಮೇಲ್ದರ್ಜೆಗೇರಿಸಲಾಗುತ್ತಿದೆ. ಹೆಬ್ಬಾಳ, ಕೆ.ಆರ್.ಪುರ, ಗೊರಗುಂಟೆಪಾಳ್ಯ ಸೇರಿ ನಗರದ ಇತರ ಭಾಗಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಒತ್ತು ನೀಡಲಾಗಿದೆ.
- ಎಂ. ಮಹೇಶ್ವರ ರಾವ್, ಜಿಬಿಎ ಮುಖ್ಯ ಆಯುಕ್ತ.