ಬಿಶ್ವಜಿತ್ ಮಿಶ್ರಾ ಹೇಳಿಕೆ 
ರಾಜ್ಯ

ವನ್ಯಜೀವಿ ಕಾರಿಡಾರ್ ಸಂರಕ್ಷಣೆಗೆ ನೀತಿ: ಬಿಶ್ವಜಿತ್ ಮಿಶ್ರಾ ಹೇಳಿಕೆ-wildlife corridors

ಬೆಂಗಳೂರು: ರಾಜ್ಯದಲ್ಲಿನ ವನ್ಯಜೀವಿ ಕಾರಿಡಾರ್ ಸಂರಕ್ಷಣೆಗಾಗಿ ನೀತಿ ರೂಪಿಸಲಾಗಿದೆ. ಇದಕ್ಕೆ ಸರ್ಕಾರ ಅನುಮತಿ ನೀಡುವ ನಿರೀಕ್ಷೆ ಇದೆ ಎಂದು ಅರಣ್ಯ ಇಲಾಖೆಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಬಿಶ್ವಜಿತ್ ಮಿಶ್ರಾ ಹೇಳಿದ್ದಾರೆ.
ಚರ್ಚ್‌ಸ್ಟ್ರೀಟ್‌ನ ಸಮಗತ ಫೌಂಡೇಶನ್‌ನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ, ರಶ್ಮಿ ಹೆದ್ದೂರಿ, ಎಚ್.ಸಿ.ಪೂರ್ಣೇಶ್ ಮತ್ತು ಜೋಶಿಕಾ ಕೊಮರ್ಲಾ ರಚಿಸಿರುವ ‘ದಿ ಲಾಸ್ಟ್ ಪಾಥ್‌ವೇ; ವೈಲ್ಡ್‌ಲೈಫ್​ ಕಾರಿಡಾರ್ಸ್ ಆಫ್​​ ಕರ್ನಾಟಕ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಅರಣ್ಯ ಇಲಾಖೆಯ ಸಮಿತಿ ರೂಪಿಸಿದ ನೀತಿ ಮಹತ್ತರ ಬದಲಾವಣೆ ತರಲಿದೆ. ವನ್ಯಜೀವಿಗಳ ಕಾರಿಡಾರ್ ಅವುಗಳ ಜೀವನಾಡಿಯಾಗಿದೆ. ಈ ಪ್ರದೇಶಗಳು ಅರಣ್ಯ, ಕಂದಾಯ , ಕೃಷಿ ಮತ್ತು ಖಾಸಗಿ ಭೂಮಿಯಲ್ಲಿ ಹಂಚಿಹೋಗಿವೆ. ವನ್ಯಜೀವಿಗಳು ಆಹಾರ, ನೀರು ಅರಸಿ ಹೋಗುವುದು, ಸಹ ಜೀವಿಗಳ ಜೊತೆಗೂಡುವುದು, ಸುರಕ್ಷಿತ ಆವಾಸ ಸ್ಥಾನಕ್ಕಾಗಿ ಇಲ್ಲಿ ತಿರುಗಾಡಬೇಕಾಗುತ್ತದೆ. ಇದು ಪರಿಸರ ವಿಜ್ಞಾನದ ಸಹಜ ಪ್ರಕ್ರಿಯೆ. ವನ್ಯಜೀವಿ ರಕ್ಷಣೆಗಾಗಿ ಕಾರಿಡಾರ್‌ಗಳ ಸ್ಥಳವನ್ನು ರಕ್ಷಿಸುವುದು ಅತ್ಯಂತ ಮುಖ್ಯ ಎಂದರು.
ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಮಾತನಾಡಿ, ಶೇ. 72 ವನ್ಯಜೀವಿ ಕಾರಿಡಾರ್, ಅರಣ್ಯ ಇಲಾಖೆ ವ್ಯಾಪ್ತಿಯಲ್ಲಿದೆ. ಶೇ.11 ಖಾಸಗಿ ಒಡೆತನದಲ್ಲಿದ್ದರೆ, ಬಾಕಿ ಪ್ರದೇಶ ಮಿಶ್ರ ಒಡೆತನದಲ್ಲಿದೆ. ದರೋಜಿ ವನ್ಯಜೀವಿಧಾಮ ಒಳಗೊಂಡಂತ ಮಿಶ್ರ ಒಡೆತನದಲ್ಲಿರುವ ಕಾರಿಡಾರನ್ನು ನಿರ್ವಹಣೆ, ಮೇಲ್ವಿಚಾರಣೆ ಮಾಡುವುದು ಕಷ್ಟ. ಕೊಡಗು ಮತ್ತು ಚಿಕ್ಕಮಗಳೂರನ ಜಿಲ್ಲೆಗಳಲ್ಲಿ ಖಾಸಗಿ ವನ್ಯಜೀವಿ ಕಾರಿಡಾರ್ ಇದ್ದು, ಆನೆಗಳು ಕಾಯಂ ಆಗಿ ಓಡಾಡಲಿವೆ. ಇಲ್ಲಿ ಸಂರಕ್ಷಣೆ ಕಾರ್ಯ ಕೈಗೊಳ್ಳಬೇಕು. ಕೆಲ ವನ್ಯಜೀವಿ ಕಾರಿಡಾರ್‌ಗಳು ಹಲವು ಬಗೆಯ ಅಪಾಯ ಎದುರಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಮಾಜಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ. ಕೆ.ಸಿಂಗ್, ಬಿಡಿಎ ಆಯುಕ್ತ ಪಿ. ಮಣಿವಣ್ಣನ್ ಮತ್ತಿತರರಿದ್ದರು.