ಚಿನ್ನದ ತಾಳಿಯನ್ನು ಪೊಲೀಸ್ ರೂಪೇಶ್ ಮಹಿಳೆಗೆ ಹಿಂದಿರುಗಿಸಿದರು.
- ರಸ್ತೆಯಲ್ಲಿ ಸಿಕ್ಕ ಚಿನ್ನದ ತಾಳಿ
- ಗುಪ್ತಚರ ಇಲಾಖೆ ಸಿಬ್ಬಂದಿ ಪೊಲೀಸ್ ರೂಪೇಶ್
ಹೊಳೆನರಸೀಪುರ: ರಸ್ತೆಯಲ್ಲಿ ಸಿಕ್ಕ ಚಿನ್ನದ ತಾಳಿಯನ್ನು ಗುಪ್ತಚರ ಇಲಾಖೆ ಸಿಬ್ಬಂದಿ ಪೊಲೀಸ್ ರೂಪೇಶ್ ಅವರು ಮಹಿಳೆಗೆ ಹಿಂದಿರುಗಿಸುವ ಮೂಲಕ ಪ್ರಾಮಾಣಿಕತೆ ಮೆರದಿದ್ದಾರೆ.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಸೋಮವಾರ ಲಕ್ಷ್ಮೀ-ಅಭಿಲಾಷ್ ದಂಪತಿ ತಾಲೂಕಿನ ಹಳ್ಳಿಮೈಸೂರು ಹೋಬಳಿಯ ಮಾದಿಹಳ್ಳಿ ಗ್ರಾಮದ ತಂಗಿ ಮನೆಗೆ ಹೋಗಲು ತುರುವೇಕೆರೆ ತಾಲೂಕಿನ ಗುಡ್ಡೇನಹಳ್ಳಿ ಗ್ರಾಮದಿಂದ ಬಂದಿದ್ದರು.
ಹಣ್ಣಿನ ಅಂಗಡಿಯೊಂದರಲ್ಲಿ ಹಣ್ಣು ಖರೀದಿಸುವ ಸಂದರ್ಭ ಲಕ್ಷ್ಮೀ ಅವರ ಕೊರಳಿನಲ್ಲಿದ್ದ ಕರಿಮಣಿ ಜತೆಗಿನ ನಾಲ್ಕೂವರೆ ಗ್ರಾಂನ ಚಿನ್ನದ ತಾಳಿ ಕಳಚಿ ಬಿದ್ದಿದ್ದು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗುಪ್ತಚರ ಇಲಾಖೆಯ ರೂಪೇಶ್‌ಗೆ ಸಿಕ್ಕಿದೆ. ಬಳಿಕ ರೂಪೇಶ್ ಹಣ್ಣಿನ ಅಂಗಡಿ ಮಾಲೀಕನ ಬಳಿ ಈ ಬಗ್ಗೆ ವಿಚಾರಿಸಿ, ಯಾರಾದರೂ ಹುಡುಕಿಕೊಂಡು ಬಂದರೆ ಫೋನ್ ನಂಬರ್ ಕೊಡುವಂತೆ ತಿಳಿಸಿ ಬಂದಿದ್ದರು.
ಬಳಿಕ ತಾಳಿ ಇಲ್ಲದಿರುವುದನ್ನು ಕಂಡ ದಂಪತಿ ಹಣ್ಣಿನ ಮಾಲೀಕನ ಬಳಿ ವಿಚಾರಿಸಿದಾಗ ರೂಪೇಶ್ ನಂಬರ್ ಕೊಟ್ಟಿದ್ದಾರೆ. ನಂತರ ಕರೆ ಮಾಡಲಾಗಿ ಮಂಗಳವಾರ ದಂಪತಿಯನ್ನು ಠಾಣೆಗೆ ಕರೆಸಿ ನಗರ ಠಾಣೆಯ ಪಿಎಸ್‌ಐ ಅಭಿಜಿತ್ ಸಮ್ಮುಖದಲ್ಲಿ ಮಾಲೀಕರಿಗೆ ಸರ ಹಿಂದುರಿಗಿಸಿದ್ದಾರೆ.