ಇಬ್ಬರು ಮಕ್ಕಳು, ಪತ್ನಿ ಜತೆ ಕಾಂಟ್ರ್ಯಾಕ್ಟರ್ ದಿಢೀರ್ ನಾಪತ್ತೆ
- ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಡನೆ ರಮೇಶ್ ಕುಮಾರ್ ದಿಢೀರ್ ನಾಪತ್ತೆ
- ಫೋನ್, ಡೆತ್‌ನೋಟ್ ಇಟ್ಟು ಮನೆಯಿಂದ ಕಣ್ಮರೆಯಾಗಿರುವ ರಮೇಶ್
ದಾವಣಗೆರೆ: ಬನಶಂಕರಿ ಬಡಾವಣೆಯ ನಿವಾಸಿ ಕೆ.ಬಿ. ರಮೇಶ್‌ಕುಮಾರ್ (38) ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳೊಡನೆ ದಿಢೀರ್ ನಾಪತ್ತೆಯಾಗಿರುವ ಪ್ರಕರಣ ವಿದ್ಯಾನಗರ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದೆ.
ಪತ್ನಿ ಜಯಶೀಲಾ (36), ಪುತ್ರ ಹಿತೇಶ್ (9), ಪುತ್ರಿ ಪ್ರೇರಣಾ (3) ಜತೆ ಕಣ್ಮರೆಯಾಗಿದ್ದಾರೆ. ರಜೆ ಹಿನ್ನೆಲೆ ಬೆಂಗಳೂರಿಗೆ ಹೋಗುವುದಾಗಿ ತಾಯಿಗೆ ಮಾಹಿತಿ ನೀಡಿದ್ದ ರಮೇಶ್ ಕುಮಾರ್, ಹಲವು ಬಾರಿ ಫೋನ್ ಮಾಡಿದರೂ ಸ್ವಿಚ್ ಆಫ್ ಬಂದ ಹಿನ್ನೆಲೆ ಬಾಗಿಲು ತೆರೆದು ಒಳಗೆ ಏನಾಗಿದೆ ಎಂದು ಪರಿಶೀಲಿಸಲಾಗಿದೆ.
ಎಷ್ಟೇ ಫೋನ್ ಮಾಡಿದ್ರು ಸ್ವಿಚ್ ಆಫ್ ಬಂದ ಬೆನ್ನಲ್ಲೇ ರಮೇಶ್ ಅವರ ತಾಯಿ, ತನ್ನ ಬಳಿಯಿದ್ದ ಮತ್ತೊಂದು ಬೀಗದಿಂದ ಬಾಗಿಲು ತೆರೆದು ಒಳಗೆ ಹೋಗಿದ್ದಾರೆ. ಈ ವೇಳೆ ಮನೆಯೊಳಗೆ ಫೋನ್‌ಗಳು, ಡೆತ್‌ನೋಟ್ ಮಾತ್ರ ಪತ್ತೆಯಾಗಿದ್ದನ್ನು ಕಂಡು ತಕ್ಷಣವೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಡೆತ್ನೋಟ್ನಲ್ಲಿ ಏನಿದೆ?
ಸಾಲಬಾಧೆ ತಾಳಲಾರದೆ ನಾವು ಸಾವಿನ ಮೊರೆ ಹೋಗುತ್ತಿದ್ದೇವೆ ಎಂದು ರಮೇಶ್ ಡೆತ್ನೋಟ್ನಲ್ಲಿ ಬರೆದಿದ್ದಾರೆ. ಮನೆಯ ಆವರಣದಲ್ಲೇ ಕಾರು, ದ್ವಿಚಕ್ರ ವಾಹನಗಳಿವೆ. ಅಲ್ಲಿಗೆ, ತಮ್ಮ ಯಾವುದೇ ವಾಹನಗಳಲ್ಲಿ ಅವರು ಪ್ರಯಾಣಿಸಿಲ್ಲ ಎಂಬುದು ಸ್ಪಷ್ಟವಾಗಿದೆ. ಮಗ, ಸೊಸೆ, ಮೊಮ್ಮಕ್ಕಳು ನಾಪತ್ತೆಯಾದ ಬಗ್ಗೆ ತಾಯಿ ದೂರು ನೀಡಿದ್ದು, ಮಿಸ್ಸಿಂಗ್ ಕೇಸ್ನಡಿ ವಿದ್ಯಾನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.