ಕಾರ್ಯಕ್ರಮದಲ್ಲಿ ಈಶಾನ್ಯ ವಲಯ ಪೊಲೀಸ್ ಉಪಮಹಾನಿರೀಕ್ಷಕ ಶಾಂತನು ಸಿನ್ಹಾ, ಆಂತರಿಕ ಭದ್ತತೆಯ ಗುಪ್ತ ವಾರ್ತೆಯ ಎಸ್.ಪಿ. ಎ.ಆರ್.ಕರ್ನಲ್, ಜಿಲ್ಲಾ ಉಪ ಪೊಲೀಸ್ ಆಯುಕ್ತ ಪ್ರವೀಣ್ ಎಚ್. ನಾಯಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣನವರ್, ಜಿಲ್ಲಾ ಶಸ್ತç ಮೀಸಲು ಪಡೆಯ ಡಿವೈಎಸ್‌ಪಿ ಶರಣಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳು ನಿವೃತ್ತ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.
ಕಲಬುರಗಿ: ಹೆಚ್ಚುತ್ತಿರುವ ಸೈಬರ್ ವಂಚನೆ ಮತ್ತು ಮಾದಕ ದ್ರವ್ಯ ಜಾಲದ ವಿರುದ್ಧ ಪರಿಣಾಮಕಾರಿ ಹೋರಾಟ ನಡೆಸಲು ಪೊಲೀಸ್ ಇಲಾಖೆ ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳಬೇಕು ಎಂದು ನಿವೃತ್ತ ಸಹಾಯಕ ಪೊಲೀಸ್ ಆಯುಕ್ತ ಮೊಹಮ್ಮದ್ ಇಸ್ಮಾಯಿಲ್ ಷರೀಫ್ ಹೇಳಿದರು.
ಗುರುವಾರ ನಗರದ ಸಶಸ್ತ್ರ ಪೊಲೀಸ್ ಕವಾಯತು ಮೈದಾನದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಧ್ವಜ ದಿನಾಚರಣೆ ಅಂಗವಾಗಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಗಾಗಿ 'ಮನೆ ಮನೆಗೆ ಪೊಲೀಸ್' ಯೋಜನೆಯಡಿ ನಿಖರ ದತ್ತಾಂಶ ಸಂಗ್ರಹಿಸುವುದು ಮತ್ತು ಅಪರಾಧಿಗಳ ಪತ್ತೆಗೆ 'ಹೂ ಈಸ್ ಹೂ' ಡೈರಿಗಳನ್ನು ನಿರ್ವಹಿಸುವುದು ಅತ್ಯಗತ್ಯ ಎಂದು ಅವರು ಸಲಹೆ ನೀಡಿದರು. ಜೊತೆಗೆ, ಪೊಲೀಸ್ ಸಿಬ್ಬಂದಿಗಳು ಆರ್ಥಿಕ ಭದ್ರತೆಗಾಗಿ ಉಳಿತಾಯದ ಕಡೆಗೆ ಹಾಗೂ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕೆಂದು ತಿಳಿಸಿದರು.
ಸೈಬರ್ ಅಪರಾಧ ಪ್ರಕರಣಗಳಲ್ಲಿ ಕರ್ನಾಟಕ ರಾಜ್ಯವು ದೇಶದಲ್ಲೇ ಎರಡನೇ ಸ್ಥಾನದಲ್ಲಿರುವುದು ಹಾಗೂ ಸಾವಿರಾರು ಕೋಟಿ ರೂಪಾಯಿ ವಂಚನೆ ನಡೆಯುತ್ತಿರುವುದು ಗಂಭೀರ ಆತಂಕಕಾರಿ ಸಂಗತಿ ಎಂದು ಅವರು ತಿಳಿಸಿದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಅಡ್ಡೂರು ಶ್ರೀನಿವಾಸಲು ಸ್ವಾಗತಿಸಿ ಮಾತನಾಡಿ, 1965ರ ಏಪ್ರಿಲ್ 2ರಂದು ಕರ್ನಾಟಕ ರಾಜ್ಯ ಪೊಲೀಸ್ ಕಾಯ್ದೆ ಜಾರಿಗೆ ಬಂದ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತಿದ್ದು, 1984ರಿಂದ ಪೊಲೀಸ್ ಧ್ವಜ ದಿನ ಮತ್ತು ಪೊಲೀಸ್ ಕಲ್ಯಾಣ ದಿನಗಳನ್ನು ಒಂದಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಗರ ಪೊಲೀಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಪೊಲೀಸ್ ಇಲಾಖೆ ಜನಸ್ನೇಹಿ ಸೇವೆಯ ಮೂಲಕ ಸಾರ್ವಜನಿಕರ ವಿಶ್ವಾಸ ಗಳಿಸಬೇಕು ಎಂದು ಅಭಿಪ್ರಾಯಪಟ್ಟರು. ಅತ್ಯುತ್ತಮ ಸೇವೆ ಸಲ್ಲಿಸಿದ 153 ಸಿಬ್ಬಂದಿಗಳಿಗೆ 'ಮುಖ್ಯಮಂತ್ರಿಗಳ ಚಿನ್ನದ ಪದಕ' ಹಾಗೂ 'ಡಿಜಿ ಕಮೆಂಡೇಶನ್ ಡಿಸ್ಕ್' ನೀಡಲಾಗುವುದು. ಅದರಲ್ಲಿ ನಮ್ಮ ಜಿಲ್ಲೆಯ ಐದು ಜನರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುತ್ತದೆ. ಸಿಬ್ಬಂದಿಗಳ ಕಲ್ಯಾಣಕ್ಕಾಗಿ ಶೈಕ್ಷಣಿಕ ಧನಸಹಾಯ ಮತ್ತು ಆರೋಗ್ಯ ಯೋಜನೆಗಳ ಸದ್ಬಳಕೆಗೆ ಒತ್ತು ನೀಡಲಾಯಿತು. ಮುಖ್ಯವಾಗಿ, ಕನಿಷ್ಠ ಪ್ರೀಮಿಯಂನಲ್ಲಿ ಕುಟುಂಬಕ್ಕೆ ಗರಿಷ್ಠ ಆರ್ಥಿಕ ಭದ್ರತೆ ನೀಡುವ 'ಟರ್ಮ್ ಇನ್ಶೂರೆನ್ಸ್' ಪ್ರತಿಯೊಬ್ಬ ಸಿಬ್ಬಂದಿಯೂ ಮಾಡಿಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿಗಳ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ವಿತರಿಸಲಾಯಿತು. ವಿವಿಧ ವೃತ್ತಿಪರ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ₹30,000 ರಿಂದ ₹50,000 ವರೆಗೆ ಧನಸಹಾಯ ನೀಡಲಾಯಿತು. ನಿವೃತ್ತ ಪೊಲೀಸ್ ಸಿಬ್ಬಂದಿಗಳಿಗೆ ವೈದ್ಯಕೀಯ ನೆರವೂ ಒದಗಿಸಲಾಯಿತು.
ಕಲಬುರಗಿ ಸಬರ್ಬನ್ ಪೊಲೀಸ್ ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಶಿವಪುತ್ರಪ್ಪ ಅಣ್ಣಾರಾವ್ ಶಳಗೆ ಅವರು ಕರ್ತವ್ಯದ ಅವಧಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಅವರ ಕುಟುಂಬದ ಆರ್ಥಿಕ ಸಂಕಷ್ಟವನ್ನು ಅರಿತ ಪೊಲೀಸ್ ಆಯುಕ್ತರು ಮತ್ತು ಇಲಾಖೆಯ ಎಲ್ಲಾ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ವಯಂಪ್ರೇರಿತರಾಗಿ ದೇಣಿಗೆ ಸಂಗ್ರಹಿಸಿದ್ದರು. ಸಂಗ್ರಹವಾದ 9 ಲಕ್ಷ ರೂಪಾಯಿಗಳ ಮೊತ್ತದ ಚೆಕ್ಕನ್ನು ಶಿವಪುತ್ರಪ್ಪ ಅವರ ಪತ್ನಿ ಕಾವೇರಿ ಮತ್ತು ಮಕ್ಕಳಿಗೆ ಹಸ್ತಾಂತರಿಸಲಾಯಿತು. ಈ ಮೊತ್ತವು ಮಕ್ಕಳ ಶಿಕ್ಷಣ ಮತ್ತು ಕುಟುಂಬದ ಭವಿಷ್ಯಕ್ಕೆ ಆಸರೆಯಾಗಲಿದೆ ಎಂದು ಆಶಿಸಲಾಗಿದೆ. ಅಲ್ಲದೆ, ಅನುಕಂಪದ ಆಧಾರದ ಮೇಲೆ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುವ ಪ್ರಕ್ರಿಯೆಯ ಬಗ್ಗೆಯೂ ಭರವಸೆ ನೀಡಲಾಯಿತು
ಕಾರ್ಯಕ್ರಮದ ಅಂಗವಾಗಿ ವಿವಿಧ ಪೊಲೀಸ್ ತುಕಡಿಗಳ ಪಥಸಂಚಲನ ನಡೆಯಿತು. ಪರೇಡ್ ಕಮಾಂಡರ್ ಚಂದ್ರಶೇಖರ್ ಅವರ ನೇತೃತ್ವದಲ್ಲಿ ಎಂಟು ತುಕಡಿಗಳು ಶಿಸ್ತಿನ ಪ್ರದರ್ಶನ ನೀಡಿದವು. ಮಹಿಳಾ ಪೊಲೀಸ್ ತುಕಡಿ ಸೇರಿದಂತೆ ವಿವಿಧ ಘಟಕಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದವು.
ಕಾರ್ಯಕ್ರಮದಲ್ಲಿ ಈಶಾನ್ಯ ವಲಯ ಪೊಲೀಸ್ ಉಪಮಹಾನಿರೀಕ್ಷಕ ಶಾಂತನು ಸಿನ್ಹಾ, ಆಂತರಿಕ ಭದ್ತತೆಯ ಗುಪ್ತ ವಾರ್ತೆಯ ಎಸ್.ಪಿ. ಎ.ಆರ್.ಕರ್ನಲ್, ಜಿಲ್ಲಾ ಉಪ ಪೊಲೀಸ್ ಆಯುಕ್ತ ಪ್ರವೀಣ್ ಎಚ್. ನಾಯಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಹೇಶ್ ಮೇಘಣ್ಣನವರ್, ಜಿಲ್ಲಾ ಶಸ್ತç ಮೀಸಲು ಪಡೆಯ ಡಿವೈಎಸ್‌ಪಿ ಶರಣಪ್ಪ ಸೇರಿದಂತೆ ಪೊಲೀಸ್ ಅಧಿಕಾರಿಗಳು ನಿವೃತ್ತ ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.