ಹೊಸಕೋಟೆ ಚೊಕ್ಕಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಸೌಹಾರ್ದ ವೇದಿಕೆಯಿಂದ ಹಮ್ಮಿಕೊಂಡಿದ್ದ ಅಪರಾಧ ತಡೆ ಜಾಗೃತಿ ಸಭೆಯಲ್ಲಿ ಇನ್​ಸ್ಪೆಕ್ಟರ್​ ಗೋವಿಂದ್​ ಮಾತನಾಡಿದರು. ಸೌಹಾರ್ದ ವೇದಿಕೆ ಅಧ್ಯಕ್ಷ ಕೃಷ್ಣಪ್ಪ ಇದ್ದರು. 
ರಾಜ್ಯ

ಇನ್ಮುಂದೆ ಕೈಗಾರಿಕಾ ಪ್ರದೇಶದಲ್ಲಿ ಪೊಲೀಸ್​ ಗಸ್ತು / HOSAKOTE

ಹೊಸಕೋಟೆ : ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರು, ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ರಾತ್ರಿ ಪಾಳಿಯಲ್ಲಿ ಪೊಲೀಸ್​ ಗಸ್ತು ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಅಪರಾಧ ಪ್ರಕರಣಗಳು ಕಂಡು ಬಂದಲ್ಲಿ 112ಕ್ಕೆ ಮಾಹಿತಿ ನೀಡಿ ಅಪರಾಧಕ್ಕೆ ಕಡಿವಾಣ ಹಾಕಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಹೊಸಕೋಟೆ ಪೊಲೀಸ್​ ಠಾಣೆ ಇನ್​ಸ್ಪೆಕ್ಟರ್​ ಬಿ.ಟಿ.ಗೋವಿಂದ್​ ಮನವಿ ಮಾಡಿದರು.
ತಾಲೂಕು ಚೊಕ್ಕಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆ ಮಾಲೀಕರೊಂದಿಗೆ ಹೊಸಕೋಟೆ ಪೊಲೀಸರು ಹಮ್ಮಿಕೊಂಡಿದ್ದ ಅಪರಾಧ ತಡೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಖಾನೆಗಳ ಮಾಲೀಕರು ಗುತ್ತಿಗೆ ಹಾಗೂ ಹೊರ ರಾಜ್ಯದ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವಾಗ ಅವರ ಪೂರ್ವಪರ ಪರಿಶೀಲನೆ ಮಾಡುವುದು ಕಡ್ಡಾಯ. ಹೊರ ರಾಜ್ಯದವರು ಕೆಲಸಕ್ಕೆ ಸೇರಿದ ಮೇಲೆ ಕಳ್ಳತನ ಮಾಡಿ ಪರಾರಿಯಾಗುವ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಸಿಸಿ ಕ್ಯಾಮರಾ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕು. ಕಾರ್ಮಿಕರ ಡೇಟಾ ಸಂಗ್ರಹಿಸಿಡಬೇಕು. ಕಾರ್ಖಾನೆಗಳ ಸುತ್ತ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.
ಚೊಕ್ಕಹಳ್ಳಿ ಕೈಗಾರಿಕಾ ಪ್ರದೇಶದ ಸೌಹಾರ್ದ ವೇದಿಕೆ ಅಧ್ಯಕ್ಷ ಕೃಷ್ಣಪ್ಪ ಮಾತನಾಡಿ, ಚೊಕ್ಕಹಳ್ಳಿ ಕೈಗಾರಿಕಾ ಪ್ರದೇಶ ಈ ಹಿಂದೆ ಸೂಲಿಬೆಲೆ ಪೊಲೀಸ್​ ಠಾಣೆ ವ್ಯಾಪ್ತಿಗೆ ಒಳಪಟ್ಟಿತು. ಹೊಸಕೋಟೆ ಠಾಣೆಗೆ ಸೇರ್ಪಡೆಯಾದ ನಂತರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದ್ದ ಎರಡು ಕಳ್ಳತನ ಪ್ರಕರಣಗಳನ್ನು ಹೊಸಕೋಟೆ ಪೊಲೀಸರು ಭೇದಿಸಿ ಕಾರ್ಖಾನೆ ಮತ್ತು ಕಾರ್ಮಿಕರಿಗೆ ರಕ್ಷಣೆ ಒದಗಿಸಿದ್ದಾರೆ. ರಾತ್ರಿ ವೇಳೆ ಗಸ್ತು ವಾಹನ ಕೈಗಾರಿಕಾ ಪ್ರದೇಶದಲ್ಲಿ ಸಂಚರಿಸಲಿದ್ದು, ಕಾರ್ಮಿಕರು ಮುಕ್ತವಾಗಿ ಓಡಾಡಲು ಹಾಗೂ ಮೊಬೈಲ್​ ಕಳ್ಳತನದಂತ ಪ್ರಕರಣಗಳು ಕಡಿಮೆಯಾಗಲು ಸಾಧ್ಯವಾಗಲಿದೆ ಎಂದು ಹೇಳಿದರು. ವಿವಿಧ ಕಾರ್ಖಾನೆಗಳ ಮಾಲೀಕರು, ಸಿಬ್ಬಂದಿ ಹಾಜರಿದ್ದರು.