ಮುಧೋಳ ಪೊಲೀಸ್ ಠಾಣೆಯಲ್ಲಿ ನಡೆದ ತೆರೆದ ಮನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಸ್.ಆರ್. ಕಂಠಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿಗಳೊಂದಿಗೆ ಡಿವೈಎಸ್‌ಪಿ ರೋಶನ್ ಜಮೀರ್, ಸಿಪಿಐ ಎಂ. ನಾಗರಡ್ಡಿ, ಸಿಪಿಐ ಅಜೀತಕುಮಾರ ಹೊಸಮನಿ, ವಿಶ್ವನಾಥ ಮುನವಳ್ಳಿ ಹಾಗೂ ಪೊಲೀಸ್ ಅಧಿಕಾರಿಗಳು ಇದ್ದರು. 
ರಾಜ್ಯ

ಪೊಲೀಸ್ ಎಂದರೆ ಭಯವಲ್ಲ ಭರವಸೆ ಇರಲಿ

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್‌ಪಿ ರೋಶನ್ ಜಮೀರ್ ಹೇಳಿಕೆ
  • ತೆರೆದ ಮನೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗಿ
ಮುಧೋಳ: ಸಾರ್ವಜನಿಕರ ಸಹಕಾರವಿಲ್ಲದೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲ ಎಂದು ಜಮಖಂಡಿ ಡಿವೈಎಸ್‌ಪಿ ರೋಶನ್ ಜಮೀರ್ ಹೇಳಿದರು.
ನಗರದ ಪೊಲೀಸ್ ಠಾಣೆಯಲ್ಲಿ ಎಸ್.ಆರ್. ಕಂಠಿ ಮಹಾವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಬಿ.ಎ. ಪ್ರಥಮ, ದ್ವಿತೀಯ ಹಾಗೂ ತತೀಯ ವರ್ಷದ ವಿದ್ಯಾರ್ಥಿಗಳಿಗೆ ಭಾನುವಾರ ಆಯೋಜಿಸಿದ್ದ ’ತೆರೆದ ಮನೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪೊಲೀಸ್ ಎಂದರೆ ಭಯವಲ್ಲ, ಭರವಸೆ ಇರಬೇಕು. ಮಕ್ಕಳ ಹಕ್ಕುಗಳಿಗೆ ಧಕ್ಕೆಯಾದಾಗ ಅಥವಾ ರಕ್ಷಣೆ ಅಗತ್ಯವಿದ್ದರೆ ಪೊಲೀಸ್ ಇಲಾಖೆ ಸದಾ ನೆರವಿಗೆ ಸಿದ್ಧವಾಗಿರುತ್ತದೆ ಎಂದು ಹೇಳಿದರು.
ಪೊಲೀಸ್ ಇಲಾಖೆಯ ಬಗ್ಗೆ ವಿದ್ಯಾರ್ಥಿಗಳಲ್ಲಿರುವ ಅನಗತ್ಯ ಭಯ ಮತ್ತು ತಪ್ಪು ಕಲ್ಪನೆಗಳನ್ನು ನಿವಾರಿಸಿ, ಕಾನೂನು ಅರಿವು ಹಾಗೂ ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಕುರಿತು ಜಾಗತಿ ಮೂಡಿಸುವ ಅಗತ್ಯವಿದೆ ಎಂದರು.
ಸಿಪಿಐ ಎಂ.ನಾಗರಡ್ಡಿ ಮಾತನಾಡಿ, ಸಂಚಾರ ನಿಯಮಗಳ ಪಾಲನೆ, ಮಕ್ಕಳ ಮೇಲಿನ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಬಾಲಕಾರ್ಮಿಕ ಪದ್ಧತಿ, ಬಾಲ್ಯವಿವಾಹ, ಸೈಬರ್ ಅಪರಾಧ ಸೇರಿ ವಿವಿಧ ಕಾನೂನು ವಿಷಯಗಳ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಉತ್ತಮ ಗುರಿ ಹೊಂದಿ ಕಾನೂನು ಅರಿವು ಬೆಳೆಸಿಕೊಳ್ಳುವುದರ ಜೊತೆಗೆ ತಮ್ಮ ಕುಟುಂಬಕ್ಕೂ ಈ ಬಗ್ಗೆ ಜಾಗತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಸಿಪಿಐ ಅಜೀತಕುಮಾರ ಹೊಸಮನಿ ಮಾತನಾಡಿ, ಕಾನೂನು ಅರಿವು ಮತ್ತು ಮಾನವೀಯ ಮೌಲ್ಯಗಳು ಉತ್ತಮ ನಾಗರಿಕರ ನಿರ್ಮಾಣಕ್ಕೆ ಅತ್ಯಗತ್ಯ. ವಿಶೇಷವಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳು ಯಾವುದೇ ಸುದ್ದಿ ಪ್ರಕಟಿಸುವ ಮೊದಲು ವಾಸ್ತವಾಂಶವನ್ನು ಖಚಿತಪಡಿಸಿಕೊಳ್ಳುವುದು ಸಾಮಾಜಿಕ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಪ್ರೊಬೇಷನರಿ ಪಿಎಸ್‌ಐ ರಮೇಶ ಬಿಳಗುಂಡಿ ಪೊಲೀಸ್ ಇಲಾಖೆಯ ಕಾರ್ಯವೈಖರಿ, ಜವಾಬ್ದಾರಿಗಳು ಹಾಗೂ ಕಾನೂನುಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಎಸ್‌ಐ ಶಿವಪ್ಪ ಶಾಬಾದಿ, ಹವಾಲ್ದಾರ ಪದ್ಮಾವತಿ ಅಗಸರ ಸೇರಿ ಪೊಲೀಸ್ ಸಿಬ್ಬಂದಿ ಹಾಗೂ ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಇದ್ದರು. ಪತ್ರಿಕೋದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ವಿಶ್ವನಾಥ ಮುನವಳ್ಳಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಮಹಾಂತೇಶ ಹಿರೇಮಠ ವಂದಿಸಿದರು.