ಡಿಬಾರ್ ಆದ್ರೆ ಶಾಶ್ವತ ನಿಷೇಧ: ಖಾಕಿ ಹುದ್ದೆಗಾಗಿ ಕಳ್ಳದಾರಿ ಹಿಡಿಯುವವರ ಮೇಲೆ ಇಲಾಖೆ ಕಣ್ಣು! Police Recruitment
- ಪೊಲೀಸ್ ಹುದ್ದೆ ನೇಮಕಾತಿ ಅಕ್ರಮದಲ್ಲಿ ಸಿಕ್ಕಿಬಿದ್ದ 216 ಅಭ್ಯರ್ಥಿಗಳಿಗೆ ಶಾಶ್ವತ ನಿಷೇಧ
- ನೇಮಕಾತಿ ಪರೀಕ್ಷೆಗಳಲ್ಲಿ ಅವ್ಯವಹಾರ ಎಸಗಿದವರ ಅರ್ಜಿಗಳನ್ನು ತಿರಸ್ಕರಿಸಲು ಕೆಇಎಗೆ ಸೂಚನೆ
- 2021ರ 545 ಪಿಎಸ್ಐ ಹಗರಣದ 53 ಅಭ್ಯರ್ಥಿಗಳು ಸೇರಿದಂತೆ ಕಳಂಕಿತರ ಪಟ್ಟಿ ಬಿಡುಗಡೆ
- ಅರ್ಹತೆ ಪಡೆಯಲು ಕಳ್ಳದಾರಿ ಹಿಡಿದವರ ಆಧಾರ್ ನಂಬರ್ ಹಾಗೂ ಅಪರಾಧ ವಿವರ ಪ್ರಕಟ
ಬೆಂಗಳೂರು : ಪೊಲೀಸ್ ಹುದ್ದೆ ನೇಮಕಾತಿ ( Police Recruitment ) ಅವ್ಯವಹಾರದಲ್ಲಿ ಸಿಕ್ಕಿಬಿದ್ದು ಡಿಬಾರ್ ಆಗಿರುವ ಅಭ್ಯರ್ಥಿಗಳಿಗೆ ಭವಿಷ್ಯದಲ್ಲಿ ಯಾವುದೇ ನೇಮಕಾತಿ ಪರೀಕ್ಷೆಯಲ್ಲಿ ಪಾಲ್ಗೊಳ್ಳದಂತೆ ಪೊಲೀಸ್ ಇಲಾಖೆ ಶಾಶ್ವತ ನಿಷೇಧ ಹೇರಿದೆ. ಕಳಂಕಿತರು ಯಾವುದೇ ಪರೀಕ್ಷೆಗೂ ಅರ್ಜಿ ಸಲ್ಲಿಸದಂತೆ ಮುಂಜಾಗ್ರತಾ ಕ್ರಮ ವಹಿಸಿರುವ ಪೊಲೀಸ್ ನೇಮಕಾತಿ ವಿಭಾಗ, ಅಕ್ರಮದಲ್ಲಿ ಭಾಗಿಯಾದ ಎಲ್ಲ ಅಭ್ಯರ್ಥಿಗಳ ಹೆಸರು, ಅಪರಾಧ ವಿವರ ಹಾಗೂ ಆಧಾರ್ ನಂಬರ್ ಸಹಿತ ಪಟ್ಟಿಯನ್ನು ಸಿದ್ಧಪಡಿಸಿ ಪ್ರಕಟಿಸಿದೆ.
ಪೊಲೀಸ್ ಇಲಾಖೆಯಲ್ಲಿ ಖಾಲಿ ಉಳಿದಿರುವ ಸಿವಿಲ್, ಸಶಸ್ತ್ರ, ಕೆಎಸ್ಆರ್ಪಿ ಮತ್ತು ಕೆಎಸ್ಐಎಸ್ಎಫ್ ಘಟಕಗಳ 7905 ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಆ.8ರಿಂದ ಸೆ.20ರವರೆಗೆ ಲಿಖಿತ ಪರೀಕ್ಷೆಗಾಗಿ ವೇಳಾಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಹಿಂದಿನ ನೇಮಕಾತಿಗಳಲ್ಲಿ ಅವ್ಯವಹಾರ ಎಸಗಿರುವವರು ಈಗ ನಡೆಯುತ್ತಿರುವ ಪೊಲೀಸ್ ನೇಮಕಾತಿ ಪ್ರಕ್ರಿಯೆಯಲ್ಲೂ ಅರ್ಜಿ ಸಲ್ಲಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ 216 ಆರೋಪಿ ಅಭ್ಯರ್ಥಿಗಳ ಪಟ್ಟಿ ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ಕಳುಹಿಸಿದೆ. ಕೆಇಎ ನಡೆಸುತ್ತಿರುವ ಪೊಲೀಸ್ ಇಲಾಖೆಯ ವಿವಿಧ ವೃಂದಗಳ ಹುದ್ದೆಗಳಿಗೆ ಈಗಾಗಲೇ ಡಿಬಾರ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಲ್ಲಿ ಅದನ್ನು ಪರಿಗಣಿಸದೆ ತಿರಸ್ಕರಿಸಬೇಕು.
ಯಾವುದೇ ಕಾರಣಕ್ಕೂ ಈ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗೆ ಹಾಜರಾಗಲು ಹಾಲ್ಟಿಕೆಟ್ ವಿತರಿಸಬಾರದೆಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರಿಗೆ ನೇಮಕಾತಿ ವಿಭಾಗ ಸೂಚನೆ ನೀಡಿದೆ. ನೇಮಕಾತಿ ವಿಭಾಗ ಕಳುಹಿಸಿರುವ ಪಟ್ಟಿ ಆಧರಿಸಿ ಈಗಿನ ನೇಮಕಾತಿಗೆ ಅರ್ಜಿ ಸಲ್ಲಿಸಿರುವ ಎಲ್ಲ ಅಭ್ಯರ್ಥಿಗಳ ಪೂರ್ವಾಪರಗಳನ್ನು ಕೆಇಎ ಪರಿಶೀಲನೆ ಆರಂಭಿಸಿದ್ದು, ಡಿಬಾರ್ ಅಭ್ಯರ್ಥಿಗಳನ್ನು ರೌಂಡಪ್ ಮಾಡಿ ತಿರಸ್ಕರಿಸಲಿದೆ.
ನೇಮಕಾತಿ ವಿಭಾಗ ತಯಾರಿಸಿರುವ ಕಳಂಕಿತ ಅಭ್ಯರ್ಥಿಗಳ ಪಟ್ಟಿಯಲ್ಲಿ ಸಬ್ ಇನ್ಸ್ಪೆಕ್ಟರ್ ಹಾಗೂ ಕಾನ್ಸ್ಟೆಬಲ್ ಹುದ್ದೆ ನೇಮಕಾತಿಯಲ್ಲಿ ಅಕ್ರಮ ಎಸಗಿದವರು ಹೆಚ್ಚಿದ್ದಾರೆ. ಅದರಲ್ಲೂ ರಾಷ್ಟ್ರಮಟ್ಟದಲ್ಲಿ ಪೊಲೀಸ್ ಇಲಾಖೆ ಮಾನ ಕಳೆದಿದ್ದ 2021ರ 545 ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆ ನೇಮಕಾತಿ ಅವ್ಯವಹಾರದಲ್ಲಿ ಸಿಕ್ಕಿಬಿದ್ದಿದ್ದ 53 ಪಿಎಸ್ಐ ಅಭ್ಯರ್ಥಿಗಳನ್ನೂ ಶಾಶ್ವತವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಪಟ್ಟಂತೆ ಪೊಲೀಸರು, ಏಜೆಂಟ್ಗಳು, ಎಸ್ಡಿಎ, ಎಫ್ಡಿಎ ನೌಕರರು, ಇಂಜಿನಿಯರ್ಗಳು, ಪರೀಕ್ಷಾ ಕೇಂದ್ರಗಳ ಮೇಲ್ವಿಚಾರಕರು, ಅಭ್ಯರ್ಥಿಗಳು ಸೇರಿ 113ಕ್ಕೂ ಹೆಚ್ಚು ಆರೋಪಿಗಳನ್ನು ಸಿಐಡಿ ಬಂಧಿಸಿತ್ತು. ಇದರಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್, ಡಿವೈಎಸ್ಪಿ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳೇ ಹಗರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದರು. ಅಮಾನತುಗೊಂಡಿದ್ದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಪುನಃ ಕರ್ತವ್ಯಕ್ಕೆ ಸೇರಿಸಿಕೊಳ್ಳಲಾಗಿದೆ.
ಉಳಿದಂತೆ 2018ರಲ್ಲಿ ನಡೆದ ಸಿವಿಲ್ ಕಾನ್ಸ್ಟೆಬಲ್ ಹುದ್ದೆ ನೇಮಕಾತಿ ಪರೀಕ್ಷೆ ವೇಳೆ ಪ್ರಶ್ನೆಪತ್ರಿಕೆ ಸೋರಿಕೆ ಮಾಡಲಾಗಿತ್ತು. ಇದರಲ್ಲಿ ಬರೋಬ್ಬರಿ 120 ಅಭ್ಯರ್ಥಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ 120 ಅಭ್ಯರ್ಥಿಗಳನ್ನೂ ಶಾಶ್ವತವಾಗಿ ಡಿಬಾರ್ ಮಾಡಲಾಗಿದೆ. 120ರಲ್ಲಿ 16 ಅಭ್ಯರ್ಥಿಗಳು ಮಾತ್ರ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿ, ಬೇರೆ ನೇಮಕಾತಿ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಲು ಅನುಮತಿ ಪಡೆದುಕೊಳ್ಳುವ ಮೂಲಕ ಡಿಬಾರ್ ಪಟ್ಟಿಯಿಂದ ಹೊರಗುಳಿದಿದ್ದಾರೆ. 16 ಅಭ್ಯರ್ಥಿಗಳು ಇಲಾಖೆ ನಡೆಸುವ ಪರೀಕ್ಷೆಗಳಲ್ಲಿ ಭಾಗಿಯಾಗಬಹುದಾಗಿದ್ದು, ಅವರು ಸಲ್ಲಿಸುವ ಅರ್ಜಿಗಳನ್ನು ಪರಿಗಣಿಸಬಹುದಾಗಿದೆ.
ಸಿಐಡಿ ವಶದಲ್ಲೇ 157 ಆರೋಪಿತರು!
ಈವರೆಗೆ ಕಳ್ಳದಾರಿಯಲ್ಲಿ ಹುದ್ದೆ ಗಿಟ್ಟಿಸಲು ಹೋಗಿ ಸಿಕ್ಕಿಬಿದ್ದವರ ಬಹುತೇಕ ಪ್ರಕರಣಗಳಲ್ಲಿ ಸಿಐಡಿ ತನಿಖೆ ನಡೆಸಿದೆ. ಕ್ರಿಮಿನಲ್ ಪ್ರಕರಣಗಳಲ್ಲಿ 157 ಅಭ್ಯರ್ಥಿಗಳು, ನಕಲಿ ಅಭ್ಯರ್ಥಿಗಳು ಹಾಗೂ ಮಧ್ಯವರ್ತಿಗಳನ್ನು ಸಿಐಡಿ ಬಂಧಿಸಿದೆ. ಇವರೆಲ್ಲರ ವಿವರಗಳನ್ನು ಸಿಐಡಿ, ಪೊಲೀಸ್ ನೇಮಕಾತಿ ವಿಭಾಗದ ಜತೆ ಹಂಚಿಕೊಂಡಿದೆ. ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಲ್ಲೂ ಆರೋಪಿಗಳ ವಿರುದ್ಧ ಎಫ್ಐಆರ್ಗಳು ದಾಖಲಾಗಿವೆ.
ಪಟ್ಟಿಯಲ್ಲಿರುವ ವಿವರಗಳು
* ಯಾವ ಪರೀಕ್ಷೆಯಲ್ಲಿ, ಯಾವ ರೀತಿ ಅಕ್ರಮ ಎಸಗಿದ್ದಾರೆ?
* ಅಪ್ಲಿಕೇಷನ್ ಐಡಿ, ಅರ್ಜಿದಾರನ ಹೆಸರು, ಆಧಾರ್ ಸಂಖ್ಯೆ
* ತಂದೆಯ ಹೆಸರು ಹಾಗೂ ಖಾಯಂ ವಿಳಾಸ ಉಲ್ಲೇಖ
* ಯಾವ ಪೊಲೀಸ್ ಠಾಣೆ? ದಾಖಲಾದ ಎಫ್ಐಆರ್ ಸಂಖ್ಯೆ
* ಪ್ರಕರಣ ದಾಖಲಾದ ವರ್ಷ, ಯಾವ್ಯಾವ ಸೆಕ್ಷನ್ ದಾಖಲು?
* ಬಂಧಿತ ಮಧ್ಯವರ್ತಿಗಳೆಷ್ಟು? ಯಾವ ಘಟಕದಲ್ಲಿ ಅಕ್ರಮ?
* ಯಾವ ವರ್ಷ ಡಿಬಾರ್ ಮಾಡಲಾಗಿದೆ? ಕಾರಣಗಳೇನು?
ಸಿಕ್ಕಿಬಿದ್ದವರ ಅಕ್ರಮ ಹೇಗಿತ್ತು?
* ಪರೀಕ್ಷೆಗೂ ಮುನ್ನ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು
* ಓಎಂಆರ್ ಶೀಟ್ಗಳನ್ನು ತಿದ್ದುಪಡಿ ಮಾಡಿದ್ದರು
* ಅಸಲಿ ಬದಲು ಪರೀಕ್ಷೆ ಬರೆದಿದ್ದ ನಕಲಿ ಅಭ್ಯರ್ಥಿ
* ಪರೀಕ್ಷಾ ಕೇಂದ್ರದಲ್ಲಿ ಬ್ಲೂಟೂತ್ ಬಳಸಿ ಲಾಕ್
* ಮಧ್ಯವರ್ತಿಗೆ ಹಣ ಕೊಟ್ಟು ನೇಮಕಾತಿ ಯತ್ನ
ಸಾಕ್ಷ್ಯ ಆಧರಿಸಿಯೇ ಡಿಬಾರ್
ಪಿಎಸ್ಐ ಹುದ್ದೆ, ಕಾನ್ಸ್ಟೆಬಲ್ ಹುದ್ದೆಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮೊಬೈಲ್ ಸಂಭಾಷಣೆ, ವಾಟ್ಸ್ಆಪ್ ಚಾಟ್, ಸಿಸಿ ಕ್ಯಾಮರಾ ದೃಶ್ಯಾವಳಿ, ಹಣ ವರ್ಗಾವಣೆ, ತಪ್ಪೊಪ್ಪಿಗೆ ಹೇಳಿಕೆ ಸೇರಿ ಇನ್ನಿತರ ಸಾಕ್ಷ್ಯಾಧಾರಗಳನ್ನು ತನಿಖಾ ತಂಡಗಳು ಸಂಗ್ರಹಿಸಿವೆ. ಇದೆಲ್ಲವನ್ನೂ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಉಲ್ಲೇಖ ಮಾಡಿದ್ದು, ಈ ಹಿನ್ನೆಲೆಯಲ್ಲಿಯೇ ಶಾಶ್ವತವಾಗಿ ಪರೀಕ್ಷೆಗಳಿಂದ ನಿಷೇಧಿಸಲಾಗಿದೆ.