ಅರಸೀಕೆರೆಯ ಶ್ರೀನಗರ ಬಡಾವಣೆ ನಾಗರಿಕರಿಗೆ ಪೊಲೀಸರು ಮಾಹಿತಿ ಕರಪತ್ರಗಳನ್ನು ವಿತರಣೆ ಮಾಡಿದರು.
- ನಗರಠಾಣೆ ಇನ್‌ಸ್ಪೆಕ್ಟರ್ ಕೃಷ್ಣಕುಮಾರ್
- ಪೊಲೀಸ್ ಬೀಟ್ ನಡೆಸಿದ ಬಳಿಕ ಪ್ರತಿ ಮನೆಗೆ ತೆರಳಿ ಕರ ಪತ್ರ ಹಂಚುವ ಕೆಲಸಕ್ಕೆ ಚಾಲನೆ
ಅರಸೀಕೆರೆ: ನಗರ ನಿವಾಸಿಗಳಿಗೆ ರಕ್ಷಣೆ ನೀಡಲು ಇಲಾಖೆ ಸಿಬ್ಬಂದಿ ಶ್ರಮಿಸುತ್ತಿದ್ದಾರೆ ಎಂದು ನಗರಠಾಣೆ ಇನ್‌ಸ್ಪೆಕ್ಟರ್ ಕೃಷ್ಣಕುಮಾರ್ ಹೇಳಿದರು.
ಶ್ರೀನಗರ ಬಡಾವಣೆಯಲ್ಲಿ ಸೋಮವಾರ ಸಂಜೆ ಪೊಲೀಸ್ ಬೀಟ್ ನಡೆಸಿದ ಬಳಿಕ ಪ್ರತಿ ಮನೆಗೆ ತೆರಳಿ ಕರ ಪತ್ರ ಹಂಚುವ ಕೆಲಸಕ್ಕೆ ಚಾಲನೆ ನೀಡಿ ಮಾತನಾಡಿದರು. ದ್ವಿಚಕ್ರ ವಾಹನ, ಸರ ಅಪಹರಣ, ಮನೆಗಳ್ಳತನ ಕುರಿತು ಜನರು ಅಗತ್ಯ ಮುಂಜಾಗ್ರತೆ ವಹಿಸಬೇಕು. ಅನಾಮಧೇಯ ವ್ಯಕ್ತಿಗಳ ಚಲನ ವಲನ ಕುರಿತು ಠಾಣೆಗೆ ಮಾಹಿತಿ ನೀಡಿದಲ್ಲಿ ಸಂಭವನೀಯ ಕೃತ್ಯ ತಡೆಯಲು ಸಾಧ್ಯವಾಗಲಿದೆ.
ಕುಟುಂಬ ಸದಸ್ಯರು ಬೀಗ ಹಾಕಿ ಹೋಗುವ ಮುನ್ನ ಎಚ್ಚರಿಕೆ ವಹಿಸುವ ಜತೆಗೆ ಪೊಲೀಸರಿಗೆ ತಿಳಿಸುವುದರಿಂದ ಬೀಟ್ ಹೆಚ್ಚಿಸಲು ನೆರವಾಗಲಿದೆ. ಮನೆಯ ಮುಂಭಾಗದಲ್ಲಿ ನಿಲ್ಲಿಸುವ ದ್ವಿಚಕ್ರ ವಾಹನಗಳಿಗೆ ಕೈ ಬೀಗ ಅಳವಡಿಸಬೇಕು. ಸಿಸಿ ಕ್ಯಾಮರಾ ಇದ್ದಲ್ಲಿ ಆರೋಪಿಗಳ ಪತ್ತೆ ಸುಲಭವಾಗಲಿದೆ. ನಗರದ 31 ವಾರ್ಡುಗಳಲ್ಲಿಯೂ ಪ್ರತಿದಿನ ಅರಿವು ಮೂಡಿಸುವ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು.