Police approached to trace the girl's biological parents. 
ರಾಜ್ಯ

ಬಾಲಕಿಯ ನಿಜ ಪಾಲಕರ ಪತ್ತೆ ಮಾಡಲು ಪೊಲೀಸರ ಮೊರೆ

ಚಿಂತಾಮಣಿ: ನಗರದಿಂದ ಕಾಣೆಯಾಗಿದ್ದ 12 ವರ್ಷದ ಬಾಲಕಿಯ ಪಾಲಕರನ್ನು ಪತ್ತೆ ಹಚ್ಚಲು ಮಕ್ಕಳ ಕಲ್ಯಾಣ ಸಮಿತಿ ಆದೇಶಾನುಸಾರ ನಗರ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ.
ಜುಲೈ 15ರ ಮಧ್ಯಾಹ್ನ 4.50ಕ್ಕೆ ಬಾಲಕಿಯರ ಬಾಲಮಂದಿರದ ಅಧೀಕ್ಷಕಿ ಪಿ.ಎಸ್​.ಗಾಯತ್ರಿದೇವಿ ಸಲ್ಲಿಸಿರುವ ದೂರಿನಂತೆ ಬಾಲಕಿ ನಗರದ ಎಸ್​ವಿಟಿ ಮಿಲ್​ ರಸ್ತೆ, ಇಡ್ಲಿಪಾಳ್ಯದ ವಾಸಿ ಲೇಟ್​ ಬಾಬು ಅವರ ಮಗಳಾಗಿದ್ದು, ಕೆಲ ದಿನಗಳ ಹಿಂದೆ ಚಿಂತಾಮಣಿಯಿಂದ ಕಾಣೆಯಾಗಿದ್ದಳು. ಬಳಿಕ ಕೋಲಾರ ಜಿಲ್ಲೆಯ ಕೆಜಿಎಫ್​ನ ಆಂಡರ್ಸನ್​ಪೇಟೆ ಠಾಣೆ ವ್ಯಾಪ್ತಿಯಲ್ಲಿ ಪತ್ತೆಯಾಗಿದ್ದಳು. ಹೀಗಾಗಿ ಬಾಲಕಿಯನ್ನು ಚಿಕ್ಕಬಳ್ಳಾಪುರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ, ಸಮಿತಿ ಆದೇಶದಂತೆ ಚಿಕ್ಕಬಳ್ಳಾಪುರದ ಬಾಲಕಿಯರ ಬಾಲಮಂದಿರದಲ್ಲಿ ಆಶ್ರಯ ಕಲ್ಪಿಸಲಾಗಿದೆ.
ಬಾಲಕಿ ನೀಡಿದ ವಿಳಾಸದ ಆಧಾರದ ಮೇಲೆ ಸಂಬಂಧಿಕರ ಪತ್ತೆಗೆ ಯತ್ನಿಸಿದ್ದರೂ ಈವರೆಗೆ ಯಾರೂ ಪತ್ತೆಯಾಗಿಲ್ಲ. ಬಾಲನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯಡಿ ಬಾಲಕಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ನಿಜವಾದ ಪೋಷಕರ ಪತ್ತೆಗೆ ಮಕ್ಕಳ ಕಲ್ಯಾಣ ಸಮಿತಿ ಆದೇಶಿಸಿದ್ದು, ಆ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.