- ತನಿಖೆ ಮುಂದುವರಿಸಲು ಪ್ರೆಡಿಕೇಟ್ ಕೇಸ್ ಅಗತ್ಯ
- ಇ.ಡಿ. ಸಮನ್ಸ್ ರದ್ದುಗೊಳಿಸಿ ಹೈಕೋರ್ಟ್ ಸ್ಪಷ್ಟನೆ
ಬೆಂಗಳೂರು:
ಅಕ್ರಮ ಹಣಕಾಸು ವರ್ಗಾವಣೆ ತಡೆ (ಪಿಎಂಎಲ್ಎ) ಕಾಯ್ದೆ ಅಡಿಯಲ್ಲಿ ದಾಖಲಾದ ಪ್ರಕರಣಗಳು ಪ್ರೆಡಿಕೇಟ್ ಅಪರಾಧದ ಬಲವಿಲ್ಲದೆ ಸ್ವತಂತ್ರವಾಗಿ ಉಳಿಯುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಸ್ಟೇಟ್ ಬ್ಯಾಂಕ್ ಆ್ ಇಂಡಿಯಾಗೆ (ಎಸ್ಬಿಐ) 5.6 ಕೋಟಿ ರೂಪಾಯಿ ವಂಚಿಸಿದ ಆರೋಪದಲ್ಲಿ ಹಾಸನದ ಎನ್. ಪ್ರತಾಪ್ ಎಂಬವರ ವಿರುದ್ಧ ಸಿಬಿಐ ದಾಖಲಿಸಿದ್ದ ಪ್ರಕರಣವನ್ನು ಪ್ರೆಡಿಕೇಟ್ ಅಪರಾಧವನ್ನಾಗಿ ಪರಿಗಣಿಸಿ ಇ.ಡಿ.ಯು ಪಿಎಂಎಲ್ಎ ಕಾಯ್ದೆ ಅಡಿಯಲ್ಲಿ ನೀಡಿದ್ದ ಸಮನ್ಸ್ಗಳನ್ನು ರದ್ದುಗೊಳಿಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಸಿಬಿಐ ದಾಖಲಿಸಿದ್ದ ವಂಚನೆ ಪ್ರಕರಣವನ್ನು ಸೆಷನ್ಸ್ ಕೋರ್ಟ್ ಈಗಾಗಲೇ ರದ್ದುಪಡಿಸಿದೆ. ಆದ್ದರಿಂದ ಅದೇ ಪ್ರಕರಣದ ಆಧಾರದಲ್ಲಿ ದಾಖಲಿಸಿರುವ ಮತ್ತೊಂದು ಪ್ರಕರಣದ ತನಿಖೆ ಮುಂದುವರಿಸುವ ಅಧಿಕಾರವನ್ನು ಇ.ಡಿ. ಕಳೆದುಕೊಂಡಿದೆ ಎಂದು ನ್ಯಾಯಪೀಠ ತಿಳಿಸಿದೆ. ಮೂಲ ಪ್ರಕರಣವೇ ಇಲ್ಲದಿರುವಾಗ, ಆ ಪ್ರಕರಣದಿಂದ ಯಾವುದೇ ಅಪರಾಧದ ಆದಾಯ ಸೃಷ್ಟಿಯಾಗಿದೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ನ ತೀರ್ಪುಗಳನ್ನು ಉಲ್ಲೇಖಿಸಿರುವ ನ್ಯಾಯಪೀಠ, ಇ.ಡಿ ನೀಡಿದ್ದ ಸಮನ್ಸ್ಗಳನ್ನು ರದ್ದುಪಡಿಸಿ ಆದೇಶಿಸಿದೆ. ಒಂದು ವೇಳೆ ಸಿಬಿಐ ಮೇಲ್ಮನವಿ ಸಲ್ಲಿಸಿ ಯಶಸ್ವಿಯಾದಲ್ಲಿ ಮಾತ್ರ ಇ.ಡಿಗೆ ಮರು ತನಿಖೆ ನಡೆಸಲು ಸ್ವಾತಂತ್ರ್ಯವಿರುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಪ್ರಕರಣದ ಹಿನ್ನೆಲೆ:
ಹಾಸನದ ಎಸ್ಬಿಐ ಶಾಖೆಯಲ್ಲಿ ನಕಲಿ ದಾಖಲೆಗಳನ್ನು ನೀಡಿ 5.6 ಕೋಟಿ ರೂ. ಸಾಲ ಪಡೆದು ಮರುಪಾವತಿಸದೆ ವಂಚಿಸಿದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಿ ವಿಚಾರಣಾ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿತ್ತು. ಈ ಕ್ರಮವನ್ನು ಪ್ರಶ್ನಿಸಿ ಅರ್ಜಿದಾರರು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಖಾಸಗಿ ವ್ಯಕ್ತಿಗಳ ವಿರುದ್ಧ ತನಿಖೆ ನಡೆಸಲು ಸಿಬಿಐಗೆ ರಾಜ್ಯ ಸರ್ಕಾರದ ಪೂರ್ವಾನುಮತಿ ಕಡ್ಡಾಯ. ಆದರೆ, ಈ ಪ್ರಕರಣದಲ್ಲಿ ಅದನ್ನು ಪಡೆದುಕೊಳ್ಳದ ಕಾರಣ ಪ್ರಕರಣ ರದ್ದುಗೊಳಿಸಿ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಅದೇ ಆಧಾರದಲ್ಲಿ ಹೈಕೋರ್ಟ್ ಕೂಡ ಇ.ಡಿ. ಸಮನ್ಸ್ಗಳನ್ನು ರದ್ದುಗೊಳಿಸಿದೆ.