Narendra Modi | ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರವು ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು, ತನ್ನ ಆಂತರಿಕ ಕಿತ್ತಾಟಗಳನ್ನು ಶಮನ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ (ಮೇ.10) ತೀವ್ರ ವಾಗ್ದಾಳಿ ನಡೆಸಿದರು.
ನಗರದಲ್ಲಿ ಆಯೋಜಿಸಿದ್ದ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದ್ದು, ಕಾಂಗ್ರೆಸ್ ಜನರಿಗೆ ದ್ರೋಹ ಎಸಗುತ್ತಿದೆ. ದೇಶಾದ್ಯಂತ ಬಿಜೆಪಿ ಪ್ರಭಾವ ವಿಸ್ತರಿಸುತ್ತಿರುವ ಈ ಕಾಲಘಟ್ಟದಲ್ಲಿ ಬೆಂಗಳೂರಿನಿಂದ ಕೇಸರಿ ಸೂರ್ಯ' ಉದಯಿಸುತ್ತಿದ್ದಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸರ್ಕಾರಗಳು ಅಧಿಕಾರಕ್ಕೆ ಬಂದ ಕೆಲವೇ ತಿಂಗಳುಗಳಲ್ಲಿ ಆಡಳಿತ ವಿರೋಧಿ ಅಲೆಯನ್ನು ಎದುರಿಸುತ್ತವೆ, ಏಕೆಂದರೆ ಅವರಿಗೆ ಆಡಳಿತದ ಕಾರ್ಯಸೂಚಿಯೇ ಇಲ್ಲ. ಕೈ ನಾಯಕರು ಜನರಿಗೆ ಹೇಗೆ ದ್ರೋಹ ಮಾಡಬೇಕೆಂದು ಮಾತ್ರ ತಿಳಿದುಕೊಂಡಿದ್ದು, ಸ್ವತಃ ಅವರು ಸುಳ್ಳು, ಅವರ ಭರವಸೆಗಳೂ ಸುಳ್ಳು. ಅವರ ಅಧಿಕಾರ ಪುಸ್ತಕದಲ್ಲಿ ಆಡಳಿತದ ಬಗ್ಗೆ ಯಾವುದೇ ಅಧ್ಯಾಯವಿಲ್ಲ ಎಂದು ಕಿಡಿ ಕಾರುತ್ತಾ, ಬಿಜೆಪಿಯನ್ನು ರಾಜಕೀಯ ಸ್ಥಿರತೆ ಮತ್ತು ಅಭಿವೃದ್ಧಿಯ ಸಂಕೇತವೆಂದು ಬಣ್ಣಿಸಿದರು.
ಕಾಂಗ್ರೆಸ್ ಪರಾವಲಂಬಿ ಪಕ್ಷ..ಡಿಎಂಕೆ ಬೆನ್ನಿಗೆ ಕೈ ಚೂರಿ ಹಾಕಿದೆ: ಮೋದಿ
ಕಾಂಗ್ರೆಸ್ ತನ್ನ ಮಿತ್ರಪಕ್ಷಗಳು ಮತ್ತು ದೇಶದ ಜನರಿಗೆ ದ್ರೋಹ ಮಾಡುತ್ತಲೇ ಬಂದಿದ್ದು, ಅದು ಪ್ರಾದೇಶಿಕ ಪಕ್ಷಗಳ ನೆರಳಿನಲ್ಲಿ ಬದುಕುಳಿದಿರುವ ಪರಾವಲಂಬಿ ರಾಜಕೀಯ ಶಕ್ತಿಯಾಗಿದೆ, ಅದಕ್ಕೆ ತಾಜಾ ಉದಾಹರಣೆ ಎಂದರೆ ಇತ್ತೀಚೆಗೆ ತನ್ನ ದೀರ್ಘಕಾಲದ ಮಿತ್ರ ಪಕ್ಷ ಡಿಎಂಕೆಗೆ ದ್ರೋಹ ಬಗೆದಿದ್ದು, ರಾಜಕೀಯ ಸಮೀಕರಣಗಳು ಬದಲಾದಾಗಲೆಲ್ಲಾ ಕಾಂಗ್ರೆಸ್ ತನ್ನದೇ ಮಿತ್ರಪಕ್ಷಗಳ ವಿರುದ್ಧ ತಿರುಗಿ ಬಿದ್ದಿದೆ ಎಂದು ಆರೋಪಿಸಿದರು.
ಕಳೆದ ಮೂರು ದಶಕಗಳಲ್ಲಿ ಕಾಂಗ್ರೆಸ್ ಎದುರಿಸಿದ ಬಿಕ್ಕಟ್ಟುಗಳನ್ನು ನಿವಾರಿಸಲು ಡಿಎಂಕೆ ಸಹಾಯ ಮಾಡಿದ್ದನ್ನು ನೆನಪಿಸಿದ ಪ್ರಧಾನಿ, ಯುಪಿಎ-1 ಮತ್ತು ಯುಪಿಎ-2 ಅವಧಿಯಲ್ಲಿ ಡಿಎಂಕೆ ಕಾಂಗ್ರೆಸ್ ಪಕ್ಷವನ್ನು ಹಲವಾರು ಬಾರಿ ಸಂಕಷ್ಟದಿಂದ ಹೊರತಂದಿತ್ತು. ಈಗ ರಾಜಕೀಯ ಗಾಳಿ ಬದಲಾದ ಬಳಿಕ ಕಾಂಗ್ರೆಸ್‌ನ ಅಧಿಕಾರದ ಲಾಲಸೆ ಮತ್ತು ರಾಜಕೀಯವಾಗಿ ಪ್ರಸ್ತುತವಾಗಿರಲು ತನ್ನ ಮಿತ್ರಪಕ್ಷಕ್ಕೆ ದ್ರೋಹ ಬಗೆದಿದೆ ಎಂದು ಕುಟುಕಿದರು(ಏಜೆನ್ಸೀಸ್).