Plot allocation near Dabbeghat soon 
ರಾಜ್ಯ

ದಬ್ಬೇಘಟ್ಟದ ಬಳಿ ಶೀಘ್ರವೇ ನಿವೇಶನ ಹಂಚಿಕೆ

ತುಮಕೂರು ಡೆಸ್ಕ್
ಚಿಕ್ಕನಾಯಕನಹಳ್ಳಿ: ಈ ಹಿಂದೆ ಗುಂಡುತೋಪಿನಲ್ಲಿದ್ದಂತಹ ಅಲೆಮಾರಿ ಬುಡಕಟ್ಟಿನ ಕುಟುಂಬಗಳಿಗೆ ದಬ್ಬೇಘಟ್ಟದ ಬಳಿ ಜಾಗವನ್ನು ಗುರುತಿಸಿ ಅವರಿಗೆ ನಿವೇಶನ ಹಂಚಿಕೆ ಮಾಡಿಕೊಟ್ಟು ಮನೆ ಮಂಜೂರು ಮಾಡಲು ತೊಂದರೆಯಾಗಿದ್ದು, ಅದನ್ನು ಜಿಲ್ಲಾಧಿಕಾರಿಯೊಂದಿಗೆ ಚರ್ಚೆ ನಡೆಸಿ ಕ್ರಮಕೈಗೊಳ್ಳುವುದಾಗಿ ಶಾಸಕ ಸಿ.ಬಿ. ಸುರೇಶ್​ ಬಾಬು ಭರವಸೆ ನೀಡಿದರು.
ಪಟ್ಟಣದಲ್ಲಿ ಇತ್ತೀಚೆಗೆ ಸುರಿದ ಭಾರಿ ಗಾಳಿ, -ಮಳೆಯಿಂದಾಗಿ ಗುಡಿಸಲುಗಳ ಮೇಲಿದ್ದ ಟಾರ್ಪಾಲಿನ್​ ಹಾರಿಹೋಗಿ ಸಂಕಷ್ಟಕ್ಕೆ ಸಿಲುಕಿದ್ದ ಅಲೆಮಾರಿ ಕುಟುಂಬಗಳನ್ನು ಭೇಟಿ ಮಾಡಿ ಮಾತನಾಡಿದ ಅವರು, ದಬ್ಬೇಘಟ್ಟದ ಸರ್ವೇ ನಂಬರ್​ನಲ್ಲಿ ನಿಮಗಾಗಿ ಈಗಾಗಲೇ ಜಾಗ ಗುರುತಿಸಲಾಗಿದೆ. ಆದರೆ ಅದು ಪುರಸಭೆ ಅಥವಾ ಪಂಚಾಯಿತಿ ವ್ಯಾಪ್ತಿಗೆ ಸೇರುತ್ತದೆಯೇ ಎಂಬ ಬಗ್ಗೆ ತಾಂತ್ರಿಕ ಗೊಂದಲವಿದೆ. ಈ ವಿಷಯವನ್ನು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಕೂಡಲೇ ಬಗೆಹರಿಸಲಾಗುವುದು. ಅಲೆಮಾರಿಗಳ ಯಾವುದೇ ಸಮಸ್ಯೆಗೆ ಸ್ಪಂದಿಸಲು ನಾವು ಸದಾ ಸಿದ್ಧ ಎಂದರು.
ಅಲೆಮಾರಿ ಬುಡಕಟ್ಟು ಮುಖಂಡ ಶಾಂತರಾಜು ಮಾತನಾಡಿ, ರಾಜ್ಯದಲ್ಲೇ ಅಲೆಮಾರಿಗಳಿಗೆ ಸೂರು ಕಲ್ಪಿಸಲು ಇಷ್ಟು ಮುತುವರ್ಜಿ ವಹಿಸುತ್ತಿರುವ ಶಾಸಕರು ಇವರೊಬ್ಬರೇ. ನಮ್ಮ ಸಂಕಷ್ಟಕ್ಕೆ ಸ್ಪಂದಿಸಿದ ಶಾಸಕರಿಗೆ ಹಾಗೂ ತಹಸೀಲ್ದಾರ್​ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು. ಮುಖಂಡ ವೆಂಕಟೇಶಯ್ಯ ಮಾತನಾಡಿ, 30 ವರ್ಷಗಳ ನಮ್ಮ ಹೋರಾಟಕ್ಕೆ ಈಗ ಫಲ ಸಿಕ್ಕಿದೆ. ನಮಗೆ ನಿವೇಶನದ ಜತೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಮನವಿ ಮಾಡಿದರು.
ತಹಸೀಲ್ದಾರ್​ ಎಂ. ಮಮತಾ ಮಾತನಾಡಿ, ಗುರುತಿಸಲಾದ ಜಾಗದಲ್ಲಿ ನಿವೇಶನ ಹಂಚಿಕೆ ಮಾಡಲು ದಾಖಲೆಗಳ ಪರಿಶೀಲನೆ ನಡೆಸಲಾಗುವುದು. ಅರ್ಹರೆಲ್ಲರಿಗೂ ನಿವೇಶನ ಸಿಗಲಿದ್ದು, ಸಾರ್ವಜನಿಕರು ಯಾವುದೇ ಗೊಂದಲ ಅಥವಾ ಗಲಾಟೆ ಮಾಡಿಕೊಳ್ಳಬಾರದು ಎಂದು ಸಲಹೆ ನೀಡಿದರು.