ಬಸವಕಲ್ಯಾಣ- ತಾಪಂ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಪಂ ಇಒ ಡಾ. ಗಿರೀಶ್​ ಬದೋಲೆ ಮಾತನಾಡಿದರು. ಇಒ ರಮೇಶ ಸುಲ್ಪಿ, ಜಯಪ್ರಕಾಶ ಚವ್ಹಾಣ್​, ಎಡಿಗಳಾದ ಮಹ್ಮದ್​ ಸಲೀಂ, ಅರುಣಕುಮಾರ ಪಾಟೀಲ್​, ಎಡಿಪಿಸಿ ದೀಪಕ ಕಡಿಮನಿ ಇದ್ದರು. 
ರಾಜ್ಯ

ಸಮುದಾಯ ಆಧಾರಿತ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಿ

ಬಾಬುರಾವ ಯಡ್ರಾಮಿ

ಪ್ರಮುಖ ಮುಖ್ಯಾಂಶಗಳು

  • ಜಿಪಂ ಸಿಇಒ ಡಾ.ಗಿರೀಶ್​ ಬದೋಲೆ ಸೂಚನೆ
  • ಕಲ್ಯಾಣದಲ್ಲಿ ಪ್ರಗತಿ ಪರಿಶೀಲನಾ ಸಭೆ
ಬಸವಕಲ್ಯಾಣ: ವಿಬಿ-ಜಿ ರಾಮ್​ ಜಿ ಯೋಜನೆಯಡಿ ಸಮುದಾಯ ಆಧಾರಿತ ಕಾಮಗಾರಿಗಳಿಗೆ ಹೆಚ್ಚಿನ ಒತ್ತು ಕೊಡಬೇಕು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಗಿರೀಶ್​ ಬದೋಲೆ ಸೂಚಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಗುರುವಾರ ಕರೆದಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕಿನ 30 ಗ್ರಾಪಂಗಳ ಪೈಕಿ ಕನಿಷ್ಠ 10 ಗ್ರಾಪಂಗಳಲ್ಲಿ ಸಮುದಾಯ ಕಾಮಗಾರಿಗಳು ನಿರಂತರವಾಗಿ ಚಾಲ್ತಿಯಲ್ಲಿ ಇರಬೇಕು. ಈ ಯೋಜನೆಯಡಿ ಡಿಇಒ ಲಾಗಿನಲ್ಲಿ ಕಾಮಗಾರಿ ವರ್ಕ್​ ಕೋಡ್​ ತೆಗೆಯಲು ಅವಕಾಶ ನೀಡಲಾಗಿದೆ. ಹೀಗಾಗಿ ಆದಷ್ಟು ಹೆಚ್ಚೆಚ್ಚು ಮಾನವ ದಿನಗಳು ಸೃಜನೆ ಮಾಡಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.
ಒಟ್ಟು- 318 ಕಾಮಗಾರಿಗಳಿದ್ದು, ಸಮುದಾಯ ಕಾಮಗಾರಿಗಳಲ್ಲಿ ಗ್ರಂಥಾಲಯ, ಬಸ್​ ನಿಲ್ದಾಣ, ಪಾರ್ಕಿಂಗ್​, ಎಸ್​ಎಂಡಬ್ಲೂಘಟಕ, ಅಂಗನವಾಡಿ ಹಾಗೂ ಶಾಲಾ ಕೋಣೆಗಳ ದುರಸ್ತಿ ಕಾಮಗಾರಿ ಸೇರಿ 120 ಕ್ಕೂ ಹೆಚ್ಚು ವೈಯಕ್ತಿಕ ಕಾಮಗಾರಿಗಳು ಮಾಡಿಕೊಳ್ಳಲು ಅವಕಾಶ ಇದೆ. ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಟ 100 ಜನ ಫಲಾನುಭವಿಗಳನ್ನು ಗುರುತಿಸಿ ವೈಯಕ್ತಿಕ ಕಾಮಗಾರಿಗಳನ್ನು ನೀಡಬೇಕು. ಪ್ರತಿ ಗ್ರಾಪಂನಲ್ಲಿ ಕನಿಷ್ಟ 100 ಕುಟುಂಬಗಳಿಗೆ ನೂತನ ಜಾಬಕಾರ್ಡ್​ ನೀಡಬೇಕು ಎಂದು ತಿಳಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್​ ರಾಜ್​ ಇಲಾಖೆ ಸಚಿವರ ಆದೇಶದಂತೆ ಪ್ರತಿ ಗ್ರಾಪಂಗಳಲ್ಲಿ ಇ -ಸ್ವತ್ತು ಅಭಿಯಾನ ಜತೆಗೆ ಮನೆ ಮನೆಗೆ ಭೇಟಿ ನೀಡಿ ಮಾಡಿ ಬಾಕಿ ಇರುವ ಇ-ಸ್ವತ್ತು ಕಾಲ ಮಿತಿ ಒಳಗೆ ಮುಗಿಸಬೇಕು ಎಂದರು.
ಜಿಪಂ ಸಹಾಯಕ ನಿರ್ದೇಶಕ (ಆಡಳಿತ) ಜಯಪ್ರಕಾಶ ಮಾತನಾಡಿದರು. ತಾಪಂ ಇಒ ರಮೇಶ ಸುಲ್ಪಿ, ಸಹಾಯಕ ನಿರ್ದೇಶಕ ಮಹ್ಮದ್​ ಸಲೀಂ , ಅರುಣಕುಮಾರ ಪಾಟೀಲ್​, ಎಡಿಪಿಸಿ ದೀಪಕ ಕಡಿಮನಿ ಹಾಗೂ ಅಧಿಕಾರಿಗಳು ಇದ್ದರು.