ತಿಕೋಟಾ ತಾಲೂಕಿನ ಬಿಜ್ಜರಗಿ ಗ್ರಾಮದ ಸದ್ಗುರು ಶಿವಾನಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜರುಗಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಕಾರ್ಯಕ್ರಮವನ್ನು ಪ್ರವಚನಕಾರ ಬಾಬುರಾವ್ ಮಹಾರಾಜರ ಉದ್ಘಾಟಿಸಿದರು. ಸೋಮನಿಂಗ ದನಗೊಂಡ, ಸುಭಾಷ ಗೌಡ, ರಾಜಕುಮಾರ ಸವದಿ ಮತ್ತಿತರರಿದ್ದರು. 
ರಾಜ್ಯ

ಸರ್ವತೋಮುಖ ಅಭಿವೃದ್ಧಿ ಹರಿಕಾರ

ಪ್ರಮುಖ ಮುಖ್ಯಾಂಶಗಳು

  • ಪ್ರವಚನಕಾರ ಬಾಬುರಾವ್ ಮಹಾರಾಜರ ಅಭಿಪ್ರಾಯ
  • ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಣೆ
ತಿಕೋಟಾ: ನಾಲ್ವಡಿ ಕೃಷ್ಣರಾಜ ಒಡೆಯರ್ 38 ವರ್ಷಗಳ ರಾಜ್ಯಭಾರ ನಿರ್ವಹಿಸಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕೃಷಿ ನೀರಾವರಿ, ವಿದ್ಯುತ್, ಕೈಗಾರಿಕೆ, ಶಿಕ್ಷಣ ಮತ್ತು ಕನ್ನಡದ ಉತ್ಕೃಷ್ಟ ಅಭಿವೃದ್ಧಿಗೆ ತನ್ನದೇಯಾದ ಕೊಡುಗೆ ನೀಡಿ ಜನಮನದಲ್ಲಿ ಉಳಿದ ಒಬ್ಬ ಶ್ರೇಷ್ಠ ಆಡಳಿತಗಾರರಾಗಿದ್ದರು ಎಂದು ಪ್ರವಚನಕಾರ ಬಾಬುರಾವ್ ಮಹಾರಾಜರ ಅಭಿಪ್ರಾಯಪಟ್ಟರು.
ತಾಲೂಕಿನ ಬಿಜ್ಜರಗಿ ಗ್ರಾಮದ ಸದ್ಗುರು ಶಿವಾನಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಜರುಗಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಜಿ. ಲಕ್ಕುಂಡಿ ಮಠ ಮಾತನಾಡಿ, ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಿದ ಶ್ರೇಯಸ್ಸು ನಾಲ್ವಡಿ ಕೃಷ್ಣರಾಜ ಒಡೆಯರಿಗೆ ಸಲ್ಲುತ್ತದೆ ಎಂದು ಹೇಳಿದರು.
ಬಿಜ್ಜರಗಿ ಗ್ರಾಪಂ ಮಾಜಿ ಅಧ್ಯಕ್ಷ ಸುಭಾಷಗೌಡ ಪಾಟೀಲ ಮಾತನಾಡಿ, ಕನ್ನಡ ಪರವಾದ ಯಾವುದೇ ಕೆಲಸ ಕಾರ್ಯಗಳಿಗೆ ತನು ಮನ ಧನದಿಂದ ಸಹಕರಿಸುವುದಾಗಿ ತಿಳಿಸಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸೋಮನಿಂಗ ದನಗೊಂಡ ಮತ್ತು ಸುಭಾಷ ಗೌಡರನ್ನು ಸನ್ಮಾನಿಸಲಾಯಿತು. ಶಿಕ್ಷಕ ರಾಜಕುಮಾರ ಸವದಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆ ಗೌರವ ಕಾರ್ಯದರ್ಶಿ ಸೋಮನಿಂಗ ದನಗೊಂಡ, ದ್ರಾಕ್ಷಿ ಬೆಳೆಗಾರರ ಸಂಘದ ನಿರ್ದೇಶಕ ಪ್ರಕಾಶ ಚನಗೊಂಡ ಮತ್ತಿತರರಿದ್ದರು.