High court 
ರಾಜ್ಯ

ರಾಜಕಾಲುವೆ ಒತ್ತುವರಿ ತೆರವು ಕೋರಿ ಪಿಐಎಲ್​| High court

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಕ್ಕೆ ನೋಟಿಸ್​ ಜಾರಿ
  • ಬಫರ್​ ವಲಯ ಕಡಿತಗೊಳಿಸಿರುವ ಅಧಿಸೂಚನೆ ರದ್ಧತಿಗೂ ಮನವಿ
ಬೆಂಗಳೂರು: ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿನ ರಾಜಕಾಲುವೆಗಳ ಒತ್ತುವರಿ ತೆರವು ಮಾಡಬೇಕು ಮತ್ತು ಕಾಲುವೆಗಳ ಬಫರ್​ ವಲಯ ಕಡಿತಗೊಳಿಸಿ ನಗರಾಭಿವೃದ್ಧಿ ಇಲಾಖೆ 2025ರ ಅ. 15ರಂದು ಹೊರಡಿಸಿರುವ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂದು ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್​) ವಿಚಾರಣೆ ನಡೆಸಿದ ಹೈಕೋರ್ಟ್​, ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿದೆ.
ಜನಾಧಿಕಾರ ಸಂರ್ಷ ಪರಿಷತ್​ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್​. ಹೇಮಲತಾ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರ, ಜಿಬಿಎ ಮತ್ತು ಬಿಡಿಎಗೆ ನೋಟಿಸ್​ ಜಾರಿಯಾಗಿದ್ದು ಮುಂದಿನ ವಿಚಾರಣೆ ಆ. 2ಕ್ಕೆ ನಿಗದಿಯಾಗಿದೆ.
ರಾಜಕಾಲುವೆಗಳ ರಕ್ಷಣೆಯ ಹಿತದೃಷ್ಟಿಯಿಂದ ನಗರಾಭಿವೃದ್ಧಿ ಇಲಾಖೆಯ ವಿವಾದಿತ ಅಂತಿಮ ಅಧಿಸೂಚನೆಯನ್ನು ರದ್ದುಗೊಳಿಸಬೇಕು. ಎರಡನೆಯದಾಗಿ, ಜಿಬಿಎ, ಬಿಡಿಎಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಬೆಂಗಳೂರು ಮಹಾನಗರ ಪ್ರದೇಶದಲ್ಲಿನ ಎಲ್ಲಾ ಪ್ರಾಥಮಿಕ, ದ್ವೀತಿಯ ಮತ್ತು ತೃತೀಯ ಹಂತದ ರಾಜಕಾಲುವೆಗಳ ಬಫರ್​ ಜೋನ್​ಗಳನ್ನು ನಿಖರವಾಗಿ ಗುರುತಿಸಿ, ಗಡಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಲು ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.
ಕಾರ್ಯಾಚರಣೆ ಪ್ರಗತಿ ತಿಳಿಸಲಿ:
ಪ್ರತಿವಾದಿಗಳು ಈಗಾಗಲೇ ಗುರುತಿಸಿರುವ ರಾಜಕಾಲುವೆಗಳ ಮೇಲಿನ ಎಲ್ಲಾ ಅಕ್ರಮ ಒತ್ತುವರಿಗಳನ್ನು ತಕ್ಷಣವೇ ತೆರವುಗೊಳಿಸಲು ಆದೇಶಿಸಬೇಕು. ಅಲ್ಲದೆ, ಈ ಒತ್ತುವರಿ ತೆರವು ಕಾರ್ಯಾಚರಣೆಯ ಪ್ರಗತಿಯ ವರದಿಯನ್ನು ಕಾಲಕಾಲಕ್ಕೆ ಹೈಕೋರ್ಟ್​ಗೆ ಸಲ್ಲಿಸುವಂತೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. #high court
ℹ️

ಅಧಿಸೂಚನೆಯಲ್ಲೇನಿದೆ? 

ಅಧಿಸೂಚನೆಯ ಪ್ರಕಾರ, ಕಂದಾಯ ದಾಖಲೆಗಳ ಆಧಾರದ ಮೇಲೆ ರಾಜಕಾಲುವೆಗಳನ್ನು ಮೂರು ಭಾಗಗಳಾಗಿ ವಿಂಗಡಿಸಿ, ಅವುಗಳ ಎರಡೂ ಬದಿಗಳಲ್ಲಿ ಕಡ್ಡಾಯವಾಗಿ ಬಿಡಬೇಕಾದ ಕನಿಷ್ಠ ಬಫರ್​ ವಲಯ ವ್ಯಾಪ್ತಿಯನ್ನು ನಿಗದಿಪಡಿಸಲಾಗಿದೆ. ಪ್ರಾಥಮಿಕ ರಾಜಕಾಲುವೆಗೆ (ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಅಥವಾ ನದಿಗೆ ಮಳೆನೀರನ್ನು ಕೊಂಡೊಯ್ಯುವ ಕಾಲುವೆ) 15 ಮೀಟರ್​, ದ್ವೀತಿಯ ರಾಜಕಾಲುವೆಗೆ (ಕೆರೆಗೆ ಅಥವಾ ಪ್ರಾಥಮಿಕ ರಾಜಕಾಲುವೆಗೆ ಮಳೆನೀರನ್ನು ಕೊಂಡೊಯ್ಯುವ ಕಾಲುವೆ) 10.00 ಮೀಟರ್​, ತೃತೀಯ ರಾಜಕಾಲುವೆಗೆ (ದ್ವೀತಿಯ ರಾಜಕಾಲುವೆಗೆ ಮಳೆನೀರನ್ನು ಕೊಂಡೊಯ್ಯುವ ಕಾಲುವೆ) 5 ಮೀಟರ್​ ಬಫರ್​ ವಲಯವನ್ನು ಗುರುತಿಸಲಾಗಿದೆ. ಈ ಅಧಿಸೂಚನೆಯಲ್ಲಿ ಬರ್​ ವಲಯದ ವ್ಯಾಪ್ತಿಯನ್ನು ಕಡಿಮೆ ಮಾಡಲಾಗಿದೆ ಎನ್ನುವುದು ಆಕ್ಷೇಪಣೆಗೆ ಕಾರಣವಾಗಿದೆ.