- ಮಧ್ಯಪ್ರವೇಶಿಸಲು ಹೈಕೋರ್ಟ್ಗೆ ಕೋರಿಕೆ
ಬೆಂಗಳೂರು: ಹಿಂದಿ ಸೇರಿ ತೃತೀಯ ಭಾಷೆಗಳಾಗಿ ಅಧ್ಯಯನ ಮಾಡುವ ವಿಷಯಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಂಕಗಳ ಬದಲಿಗೆ ಗ್ರೇಡ್ ನೀಡುವುದಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಪ್ರಶ್ನಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿದೆ.
ಬೆಂಗಳೂರಿನ ಎಚ್.ಎನ್. ಚಂದನಾ ಮತ್ತು ಎಸ್. ವೆಂಕಟೇಶ್ ಎಂಬುವವರು ಅರ್ಜಿ ಸಲ್ಲಿಸಿದ್ದು, ಶಿಕ್ಷಣ ಇಲಾಖೆ ಮತ್ತು ಸಚಿವ ಮಧು ಬಂಗಾರಪ್ಪ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದೆ.
ತೃತೀಯ ಭಾಷೆಗಳಿಗೆ ಈ ವರ್ಷದಿಂದ ಅಂಕಗಳ ಬದಲಿಗೆ ಗ್ರೇಡ್ ನೀಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿಯಲ್ಲಿ ಘೋಷಿಸಿದ್ದಾರೆ. ಆದರೆ, ಈ ನಿರ್ಧಾರವನ್ನು ಘೋಷಿಸುವ ಮೊದಲು ತಜ್ಞರೊಂದಿಗೆ ಸೂಕ್ತ ಸಮಾಲೋಚನೆ ನಡೆಸಿಲ್ಲ. ಸರ್ಕಾರದ ನಿರ್ಧಾರಕ್ಕೆ ಸಚಿವ ಸಂಪುಟದ ಒಪ್ಪಿಗೆ ಪಡೆದಿಲ್ಲ. ಏಕಪಯವಾಗಿ ಸರ್ಕಾರವು ಈ ನಿರ್ಧಾರ ಕೈಗೊಂಡಿದೆ ಎಂದು ಅರ್ಜಿಯಲ್ಲಿ ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ.
ಸಚಿವರು ನೀಡಿರುವ ಹೇಳಿಕೆಯಿಂದ ಎಸ್ಸೆಸ್ಸೆಲ್ಲಿ ಪರೀಕ್ಷೆ ನಡೆಯುತ್ತಿರುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. ಈ ಕುರಿತ ಅಧಿಕೃತ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿಲ್ಲ. ಇದು ವಿದ್ಯಾರ್ಥಿಗಳ ಶಿಕ್ಷಣದ ಹಕ್ಕಿನ ಉಲ್ಲಂನೆಯಾಗಿದೆ. ಅಧಿಕೃತ ಅದೇಶವಿಲ್ಲದೆ ಇದನ್ನು ಜಾರಿಗೆ ತರಲು ಸಾಧ್ಯವಿಲ್ಲ. ಆದ್ದರಿಂದ, ನ್ಯಾಯಾಲಯ ಈ ವಿಷಯದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ.