Mullayyanagiri 
ರಾಜ್ಯ

ಮುಳ್ಳಯ್ಯನಗಿರಿಗೆ ಸಂರಕ್ಷಿತ ಸ್ಥಾನಮಾನ ಕೋರಿ ಪಿಐಎಲ್​| High court

ಪ್ರಮುಖ ಮುಖ್ಯಾಂಶಗಳು

  • ಸರ್ಕಾರಕ್ಕೆ ನೋಟಿಸ್​ ಜಾರಿಗೊಳಿಸಿದ ಹೈಕೋರ್ಟ್​
  • ನವೆಂಬರ್ 11ಕ್ಕೆ ವಿಚಾರಣೆ ಮುಂದೂಡಿಕೆ
ಬೆಂಗಳೂರು: ಮುಳ್ಳಯ್ಯನಗಿರಿ ಪ್ರದೇಶದ ಸಂಪೂರ್ಣ ವ್ಯಾಪ್ತಿಯನ್ನು 1972ರ ವನ್ಯಜಿವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಸಂರಕ್ಷಿತ ಮೀಸಲು ಪ್ರದೇಶ ಎಂದು ಘೋಷಿಸಲು ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​ ರಾಜ್ಯ ಸರ್ಕಾರಕ್ಕೆ ನೋಟಿಸ್​ ಜಾರಿಗೊಳಿಸಿದೆ.
ದಿ ಭದ್ರಾ ವೈಲ್ಡ್​ಲೈಫ್ ಕನ್ಸರ್ವೇಷನ್​ ಟ್ರಸ್ಟ್​ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಕೆ.ಎಸ್​. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು. ರಾಜ್ಯ ಸರ್ಕಾರ ಸೇರಿ ಪ್ರತಿವಾದಿಗಳಿಗೆ ನೋಟಿಸ್​ ಜಾರಿಯಾಗಿದ್ದು, ಮುಂದಿನ ವಿಚಾರಣೆ ನ. 11ಕ್ಕೆ ನಿಗದಿಯಾಗಿದೆ.
ಮಳ್ಳಯನಗಿರಿ ಶಿಖರಗಳ ಪ್ರದೇಶವನ್ನು ಸಂರಕ್ಷಿತ ಮೀಸಲು ಪ್ರದೇಶ ಎಂದು ಘೋಷಿಸಲು ನಿರ್ದೇಶನ ನೀಡಬೇಕು ಮತ್ತು ಆ ಮೀಸಲು ಪ್ರದೇಶದ ನಿರ್ವಹಣೆಗಾಗಿ ಸಮಿತಿ ರಚಿಸಲು ಆದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ. ಅಲ್ಲದೆ, ಈ ಪ್ರದೇಶದಲ್ಲಿ ನಡೆಯುತ್ತಿರುವ ಎಲ್ಲ ರೀತಿಯ ನಿರ್ಮಾಣ ಚಟುವಟಿಕೆಗಳನ್ನು ತಡೆಯಬೇಕು, ಹೊಸ ಕಟ್ಟಡಗಳಿಗೆ ಅನುಮೋದನೆ ನೀಡಬಾರದು ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಿಗೆ ತಡೆ ನೀಡಬೇಕು ಎಂದು ಮನವಿ ಮಾಡಲಾಗಿದೆ. 

ವ್ಯಾಪ್ತಿ ಕಡಿತಕ್ಕೆ ಆಕ್ಷೇಪ:

ಸಂರಕ್ಷಿತ ಮೀಸಲು ಪ್ರದೇಶ ಎಂದು ಘೋಷಿಸುವ ಬಗ್ಗೆ 2019ರ ನಂತರ ರಾಜ್ಯ ಸರ್ಕಾರವು ಹಲವು ಬಾರಿ ಕರಡು ಪ್ರಸ್ತಾವನೆಗಳನ್ನು ಹೊರಡಿಸಿದೆಯಾದರೂ, ಪ್ರತಿಯೊಂದು ಪ್ರಸ್ತಾವನೆಯಲ್ಲೂ ಸಂರಕ್ಷಿತ ಮೀಸಲು ಪ್ರದೇಶದ ವ್ಯಾಪ್ತಿಯನ್ನು ಕಡಿಮೆ ಮಾಡಲಾಗಿದೆ. ಇದುವರೆಗೆ ಯಾವ ಪ್ರಸ್ತಾವನೆಯನ್ನೂ ಜಾರಿಗೆ ತಂದಿಲ್ಲ. ಮುಳ್ಳಯ್ಯನಗಿರಿ ಪ್ರದೇಶದ ಸಂಪೂರ್ಣ ವ್ಯಾಪ್ತಿಯು 23 ಸಾವಿರ ಎಕರೆಗಳಷ್ಟು ವ್ಯಾಪಿಸಿದೆ. ಆದರೆ, ಸರ್ಕಾರದ ಕರಡು ಪ್ರಸ್ತಾವನೆಗಳಲ್ಲಿ ಅದು 10 ಸಾವಿರ ಎಕರೆಗೆ ಕುಸಿದಿದೆ. ಇದೇ ರೀತಿ ಮುಂದುವರಿದರೆ ಉಳಿದ ಪ್ರದೇಶದ ವ್ಯಾಪ್ತಿಯೂ ಕಡಿಮೆಯಾಗಬಹುದು ಎಂಬ ಆತಂಕವನ್ನು ಅರ್ಜಿದಾರರು ವ್ಯಕ್ತಪಡಿಸಿದ್ದಾರೆ. 
ℹ️

ವಾದ ಆಲಿಸಿ ತೀರ್ಮಾನ 

ಸರ್ಕಾರಕ್ಕೆ ಮಧ್ಯಂತರ ನಿರ್ದೇಶನಗಳನ್ನು ನೀಡಬೇಕು ಎಂದು ಅರ್ಜಿದಾರರ ವಕೀಲರು ಕೋರಿದರಾದರೂ, ಈ ವಿಷಯದಲ್ಲಿ ರಾಜ್ಯ ಸರ್ಕಾರದ ಉತ್ತರವನ್ನು ಮೊದಲು ಆಲಿಸಬೇಕಿದೆ ಎಂದು ನ್ಯಾಯಪೀಠ ಹೇಳಿತು. ತನ್ನ ಉತ್ತರವನ್ನು ಮುಂದಿನ ವಿಚಾರಣೆ ವೇಳೆ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.