ಹೈಕೋರ್ಟ್​  
ರಾಜ್ಯ

ಸಾರಿಗೆ ಮುಷ್ಕರಕ್ಕೆ ತಡೆಕೋರಿ ಪಿಐಎಲ್​| ಇಂದು ವಿಚಾರಣೆ| High court

ಬೆಂಗಳೂರು: ರಾಜ್ಯದಲ್ಲಿ ಮೇ 20ರಿಂದ ನಡೆಸಲು ಉದ್ದೇಶಿಸಿರುವ ಸಾರಿಗೆ ನೌಕರರ ಮುಷ್ಕರವನ್ನು ಹಿಂಪಡೆಯಲು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್​ಆರ್​ಟಿಸಿ) ಸಿಬ್ಬಂದಿಯ ಜಂಟಿ ಕ್ರಿಯಾ ಸಮಿತಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಹೈಕೋರ್ಟ್​ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್​) ಸಲ್ಲಿಕೆಯಾಗಿದೆ.
ಬೆಂಗಳೂರಿನ ಸಿ. ವೇದಾವತಿ ಮತ್ತು ಎಚ್​.ವಿ. ಶ್ರೀಧರ ಎಂಬುವವರು ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿಗಳಾದ ಸೂರಜ್​ ಗೋವಿಂದರಾಜ್​ ಮತ್ತು ಡಾ.ಕೆ. ಮನ್ಮಥರಾವ್​ ಅವರ ರಜಾಕಾಲದ ವಿಭಾಗೀಯ ಪೀಠದ ಮುಂದೆ ಮಂಗಳವಾರ (ಮೇ 19) ವಿಚಾರಣೆಗೆ ನಿಗದಿಯಾಗಿದೆ.
ಕೈಗಾರಿಕಾ ವಿವಾದ ಕಾಯ್ದೆಯ ನಿಯಮಾನುಸಾರ ಮುಷ್ಕರ ನಡೆಸುವ 14 ದಿನ ಮೊದಲೇ ನೋಟಿಸ್​ ಬಿಡುಗಡೆ ಮಾಡಬೇಕು. ಆದರೆ, ಸಿಬ್ಬಂದಿಯ ಜಂಟಿ ಕ್ರಿಯಾ ಸಮಿತಿಯು ಮುಷ್ಕರಕ್ಕೆ ಕೆಲವೇ ದಿನ ಇರುವಾಗ ನೋಟಿಸ್​ ಬಿಡುಗಡೆ ಮಾಡಿದೆ. ಜ. 1ರಿಂದ ಜೂ. 30ರ ತನಕ ಮುಷ್ಕರ ನಡೆಸದಂತೆ ರಾಜ್ಯ ಸರ್ಕಾರವು ಎಸ್ಮಾ ಕಾಯ್ದೆ ಅಡಿಯಲ್ಲಿ ಈಗಾಗಲೇ ಆದೇಶ ಹೊರಡಿಸಿದ್ದೆ. ಅಲ್ಲದೆ, ಸಂಧಾನ ಪ್ರಕ್ರಿಯೆ ಜಾರಿಯಲ್ಲಿದ್ದು, ಮೇ 25ಕ್ಕೆ ವಿಚಾರಣೆ ನಿಗದಿಯಾಗಿದೆ. ಆದ್ದರಿಂದ, ಮುಷ್ಕರ ನಡೆಸದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ತಡೆಯಾಜ್ಞೆಗೆ ಮನವಿ:

2023 ಮತ್ತು 2025ರಲ್ಲಿ ಹೈಕೋರ್ಟ್​ ಮಧ್ಯಪ್ರವೇಶದ ನಂತರ ನೌಕರರು ಮುಷ್ಕರವನ್ನು ಹಿಂಪಡೆದಿದ್ದರು. 2025ರಲ್ಲಿ ನ್ಯಾಯಾಲಯದ ಆದೇಶ ಉಲ್ಲಂಘಿಸಿದದ ಕಾರಣಕ್ಕೆ ಸೇವೆಯಲ್ಲಿ ವ್ಯತ್ಯಯ ಉಂಟಾಗಿತ್ತು. ಆ ಸಂಬಂಧ 17 ಸಾವಿರಕ್ಕೂ ಅಧಿಕ ಶೋಕಾಸ್​ ನೋಟಿಸ್​ಗಳನ್ನು ಜಾರಿ ಮಾಡುವುದು ಬಾಕಿ ಉಳಿದಿದೆ. 2025ರಲ್ಲಿ ಸರ್ಕಾರವು ಸಿಬ್ಬಂದಿಯ ವೇತನವನ್ನು ಶೇ. 12.5ರಷ್ಟು ಹೆಚ್ಚಿಸಿದ್ದು, 1,271 ಕೋಟಿ ರೂಪಾಯಿ ಮೀಸಲಿಟ್ಟಿದೆ. ಅದರಲ್ಲಿ 450 ಕೋಟಿ ರೂ. ಗಳನ್ನು ಈಗಾಗಲೇ ಬಿಡುಗಡೆ ಮಾಡಿದೆ. ಅಲ್ಲದೆ, ಸರ್ಕಾರದ ಮಟ್ಟದಲ್ಲಿ ಸಂಧಾನ ಪ್ರಕ್ರಿಯೆ ಬಾಕಿ ಇರುವಾಗ ಮುಷ್ಕರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪಣೆ ವ್ಯಕ್ತಪಡಿಸಲಾಗಿದೆ.
ಆದ್ದರಿಂದ ನೌಕರರು ಮುಷ್ಕರ ನಡೆಸದಂತೆ ಹೈಕೋರ್ಟ್​ ತಡೆಯಾಜ್ಞೆ ನೀಡಬೇಕು ಮತ್ತು ಮುಷ್ಕರ ತಡೆಯಲು ಅಗತ್ಯ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಲಾಗಿದೆ.
⚠️

ವಿದ್ಯಾರ್ಥಿಗಳಿಗೆ ಸಂಕಷ್ಟ

ರಾಜ್ಯದ್ಯಂತ ಸುಮಾರು 1.20 ಕೋಟಿ ಮಂದಿ ಪ್ರತಿದಿನ ಸರ್ಕಾರಿ ಬಸ್​ಗಳಲ್ಲಿ ಓಡಾಡುತ್ತಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಅದರಲ್ಲಿ ಶೇ.60ರಷ್ಟು ಮಹಿಳೆಯರು, ವಿದ್ಯಾರ್ಥಿನಿಯರು ಇದ್ದಾರೆ. ಮುಷ್ಕರವನ್ನು ಮೇ 20ರಿಂದ ಆರಂಭಿಸಲು ಯೋಜಿಸಲಾಗಿದೆ. ಆದರೆ, ಮೇ 18ರಿಂದ 25ರ ತನಕ ಎಸ್ಸೆಸ್ಸೆಲ್ಲಿ ಪೂರಕ ಪರೀಕ್ಷೆಗಳು ನಡೆಯುತ್ತಿವೆ. ಮುಷ್ಕರ ನಡೆದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಕ್ಕೆ ತಲುಪಲು ಸಮಸ್ಯೆಯಾಗಲಿದೆ. ವೃದ್ಧರು, ದಿನಗೂಲಿ ನೌಕರರು, ರೋಗಿಗಳು ಮತ್ತು ಆರ್ಥಿಕವಾಗಿ ಹಿಂದುಳಿದವರಿಗೆ ತೀವ್ರ ಸಮಸ್ಯೆಯಾಗಲಿದೆ ಎಂದು ಅರ್ಜಿಯಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.