ಚಿಂಚೋಳಿ ತಾಲೂಕು ಚಿಮ್ಮನಚೋಡ ಗ್ರಾಮದ ಜಮೀನಿಗೆ ಗುರುವಾರ ಭೇಟಿ ನೀಡಿ ನೆಲಕಚ್ಚಿದ ಹೆಸರು ಬೆಳೆ ಪರಿಶೀಲಿಸಿದ ದ ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ಎದುರು ರೈತರು ಗೋಳು ತೋಡಿಕೊಂಡರು.
- ಬರಪೀಡಿತ ಘೋಷಣೆ ಮಾನದಂಡಕ್ಕೆ ಕಲಬುರಗಿ ಓಕೆ
- ಜಲಾಶಯಗಳಿಗಿಲ್ಲ ಒಳಹರಿವು
- ಕೆರೆಗಳ ಸ್ಥಿತಿ ಚಿಂತಾಜನಕ
ಕಲಬುರಗಿ: ಮುಂಗಾರಿನಲ್ಲಿ ತೀವ್ರ ಮಳೆ ಕೊರತೆ ಮಧ್ಯೆ ಕೆಲವೆಡೆ ಬಿತ್ತನೆ ಮಾಡಿದ ಹೆಸರು, ಉದ್ದು ಸಂಪೂರ್ಣ ಕುಂಠಿತಗೊಂಡಿದೆ. ಒಂದು ವೇಳೆ ಮಳೆಯಾದರೂ ಇದನ್ನು ತೆಗೆದು ಪರ್ಯಾಯವಾಗಿ ತೊಗರಿ ಬಿತ್ತಬೇಕಾದ ಅನಿವಾರ್ಯತೆ ಎದುರಾಗಿದೆ. ಒಟ್ಟಾರೆ ಕಲ್ಯಾಣದ ಕಲಬುರಗಿಗೆ ಬರದ ಛಾಯೆ ದಟ್ಟವಾಗಿ ಆವರಿಸಿದೆ.
ಹೆಸರು, ಉದ್ದು, ಸೋಯಾಬೀನ್, ಹತ್ತಿ ಸಂಪೂರ್ಣ ನೆಲಕಚ್ಚಿದೆ. ಪರ್ಯಾಯವಾಗಿ ತೊಗರಿ, ಸೂರ್ಯಕಾಂತಿ, ಮೆಕ್ಕೆಜೋಳ ಬಿತ್ತಬಹುದು. ಮಳೆಯಾದರೆ ಮಾತ್ರ ಈ ಅವಕಾಶ ಸಿಗಲಿದೆ. ಮುಂಗಾರು ಹೆಸರು 54 ಸಾವಿರ ಹೆಕ್ಟೇರ್ ಗುರಿ ಪೈಕಿ 34753 ಹೆಕ್ಟೇರ್ ಮುಗಿದಿದ್ದು, ಶೇ.64 ಬಿತ್ತನೆಯಾಗಿದೆ. ಉದ್ದು 25 ಸಾವಿರ ಹೆಕ್ಟೇರ್ ಗುರಿಯಲ್ಲಿ 12631 ಹೆಕ್ಟೇರ್ ಬಿತ್ತಲಾಗಿದೆ. ಸೋಯಾಬೀನ್ 23 ಸಾವಿರ ಹೆಕ್ಟೇರ್ನಲ್ಲಿ 15040 ಹೆಕ್ಟೇರ್ (ಶೇ.65) ಬಿತ್ತನೆಯಾಗಿದೆ.
ಜೂನ್ ವಾಡಿಕೆ ಮಳೆ 107 ಮಿಮೀ ಪೈಕಿ 69 ಮಿಮೀ (ಶೇ.36 ಕೊರತೆ) ಸುರಿದಿದೆ. ಜುಲೈ ವಾಡಿಕೆ 56.55ರಲ್ಲಿ ಕೇವಲ 8.8 ಮಿಮೀ ಅಂದರೆ ಶೇ.84 ಕೊರತೆಯಾಗಿದೆ. ತೊಗರಿ 6.36 ಲಕ್ಷ ಹೆಕ್ಟೇರ್ ಗುರಿ ಪೈಕಿ 2.08 ಲಕ್ಷ ಹೆಕ್ಟೇರ್ (ಶೇ.33) ಬಿತ್ತನೆಯಾಗಿದೆ. ಇತ್ತೀಚಿನ ವಾರದಲ್ಲಿ 27 ಮಿಮೀ ವಾಡಿಕೆಯಲ್ಲಿ 2.2 ಮಿಮೀ ಮಾತ್ರ ಮಳೆಯಾಗಿದೆ. ಜಿಲ್ಲೆಯಲ್ಲಿ 167 ಮಿಮೀ ವಾಡಿಕೆ ಇದ್ದರೆ 67 ಮಿಮೀ (ಶೇ.60 ಕೊರತೆ) ಮಳೆಯಾಗಿದೆ.
ಬರ ೂಷಣೆಗೆ ಜಿಲ್ಲೆಯ ಬಹುತೇಕ ತಾಲೂಕು ಅರ್ಹತೆ ಹೊಂದಿದ್ದರೂ ಸರ್ಕಾರ ಕೆಲ ಮಾನದಂಡಗಳನ್ನು ನಿಗದಿಪಡಿಸಿದೆ. ಇದರಂತೆ ನಿರಂತರ ಮೂರು ವಾರ ಮಳೆ ಆಗಿರಬಾರದು, ಸಣ್ಣ ಕೆರೆಗಳು ಭರ್ತಿ ಆಗಿರಬಾರದು, ಶೇ.33ಕ್ಕೂ ಹೆಚ್ಚು ಬೆಳೆ ಹಾನಿಗೀಡಾಗಿರಬೇಕು, ಶೇ.60ಕ್ಕೂ ಹೆಚ್ಚು ಮಳೆ ಕೊರತೆ ಆಗಿರಬೇಕು. ಈ ಎಲ್ಲ ಮಾನದಂಡಗಳ ಪ್ರಕಾರ ಜಿಲ್ಲೆಯನ್ನು ಬರಪೀಡಿತ ೂಷಿಸಬಹುದಾಗಿದೆ. ಆದರೆ ಬಿತ್ತನೆಗೆ ಜುಲೈ ಕೊನೆವರೆಗೂ ಅವಕಾಶವಿದೆ. ಜುಲೈ ಕೊನೆವರೆಗೂ ಮಳೆ ಬಾರದಿದ್ದರೆ ಬರಪೀಡಿತ ಪ್ರದೇಶ ಪರಿಗಣಿಸಲು ಸರ್ಕಾರ ಚಿಂತನೆ ಮಾಡಬಹುದಾಗಿದೆ.
ಜಿಲ್ಲೆಯಲ್ಲಿ 31 ಕೆರೆ ಬತ್ತಿದರೆ, ಐದು ಕೆರೆಗಳಲ್ಲಿ ಅರ್ಧದಷ್ಟು ನೀರಿದೆ. 92ರಲ್ಲಿ ಶೇ.30, 42 ಕೆರೆಗಳಲ್ಲಿ ಶೇ.30&50 ಜೀವಜಲವಿದೆ. ಭೀಮಾ ಏತ ನೀರಾವರಿ ಶೇ.7 ಭರ್ತಿಯಾಗಿದೆ. ಅಫಜಲಪುರ 12, ಆಳಂದ 36, ಚಿಂಚೋಳಿ 21, ಚಿತ್ತಾಪುರ 12, ಜೇವರ್ಗಿ 6, ಕಾಳಗಿ 4, ಕಲಬುರಗಿ 12, ಕಮಲಾಪುರ 29, ಸೇಡಂ 34, ಶಹಾಬಾದ್ 1, ಯಡ್ರಾಮಿ ತಾಲೂಕಿನ 3 ಸೇರಿ ಸಣ್ಣ ನೀರಾವರಿ ಅಡಿ 170 ಕೆರೆಗಳಿವೆ. ಅಫಜಲಪುರದಲ್ಲಿ 8 ಕೆರೆ, ಆಳಂದ 9, ಚಿಂಚೋಳಿ 2, ಚಿತ್ತಾಪುರ 1, ಕಲಬುರಗಿ 3, ಕಮಲಾಪುರ 7, ಸೇಡಂ ತಾಲೂಕಿನಲ್ಲಿ ಒಂದು ಸೇರಿ 31 ಕೆರೆ ಒಡಲು ಬರಿದಾಗಿದೆ. ಅಮರ್ಜಾ ಶೇ.56.56 ಭರ್ತಿಯಾಗಿದ್ದು, ಬೆಣ್ಣೆತೊರಾ ಶೇ.66.96, ಭೀಮಾ ಏತ ನೀರಾವರಿ ಶೇ.7.29, ಚಂದ್ರಂಪಳ್ಳಿ ಶೇ.33.44, ಗಂಡೋರಿ ನಾಲಾ ಶೇ.57.29, ಕೆಳ ಮುಲ್ಲಾಮಾರಿಯಲ್ಲಿ ಶೇ.75.46 ನೀರು ಸಂಗ್ರಹವಿದೆ. ಈ ಜಲಾಶಯಗಳಿಗೆ ಒಳಹರಿವು ಬಂದ್ ಆಗಿದ್ದರಿಂದ ದಿನಗಳೆದಂತೆ ನೀರಿನ ಮಟ್ಟ ಕುಸಿಯುತ್ತ ಸಾಗಿದೆ.
"
ಮಳೆ ಕೊರತೆಯಿಂದ ಹೆಸರು, ಉದ್ದು, ಹತ್ತಿ, ಸಜ್ಜೆ ಬೆಳೆ ಸ್ಥಿತಿ ಗಂಭೀರವಾಗಿದೆ. ಪರ್ಯಾಯ ಬೆಳೆ ಯೋಜನೆ ಕುರಿತು ರೈತರಿಗೆ ಮಾಹಿತಿ ನೀಡಲಾಗಿದೆ. ಬೆಳೆ ವಿಮೆಗೆ ಸಂಬಂಧಿಸಿದಂತೆ 3.75 ಎಫ್ಐಡಿ ರೈತರಿದ್ದಾರೆ. ಈ ಬಾರಿ 3.5 ಲಕ್ಷಕ್ಕೂ ಹೆಚ್ಚು ರೈತರ ನೋಂದಣಿ ಗುರಿ ಹೊಂದಲಾಗಿದೆ. ಈಗಾಗಲೇ 2.12 ಲಕ್ಷ ರೈತರು ನೋಂದಣಿ ಮಾಡಿದ್ದಾರೆ.
— > ಸಮದ್ ಪಟೇಲ್ ಜಂಟಿ ಕೃಷಿ ನಿರ್ದೇಶಕ