- ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಆಯೋಜಿಸಿದ್ದ ಸಂವಾದ
- ಆಕ್ಸಿಯಂ ಸ್ಪೇಸ್-4 ಮಿಷನ್ ಯಶಸ್ವಿಯ ರೂವಾರಿ ಗಗನಯಾತ್ರಿ ಶುಭಾಂಶು ಶುಕ್ಲಾ
- ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ
ಬೆಂಗಳೂರು: ಗಗನಯಾನಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ. ಅವುಗಳ ಜತೆಗೆ ಜೀವನದಲ್ಲಿ ಶಿಸ್ತು ರೂಢಿಸಿಕೊಂಡಲ್ಲಿ, ನೀವು ಸಹ ನನ್ನ ರೀತಿ ಗಗನಯಾನಿ ಆಗಬಹುದು ಎಂದು ಗಗನಯಾನಿ ಶುಭಾಂಶು ಶುಕ್ಲಾ ಹೇಳಿದರು.
ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆವತಿಯಿಂದ ನಗರದ ಜವಾಹರಲಾಲ್ ನೆಹರು ತಾರಾಲಯದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಆಕ್ಸಿಯಂ ಸ್ಪೇಸ್-4 ಮಿಷನ್ ಯಶಸ್ವಿಯ ರೂವಾರಿಯಾಗಿರುವ ಗಗನಯಾತ್ರಿ ಶುಭಾಂಶು ಶುಕ್ಲಾ ಅವರು ಅಭಿನಂದನೆ ಸ್ವೀಕರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿದ ಮಾತನಾಡಿದರು.
ನೀವು ಸಹ ನನ್ನಂತೆಯೇ ಗಗನಯಾನಿ ಆಗಬಹುದು. ಆದರೆ, ಇದೊಂದೇ ಆಗಬೇಕೆಂದು ಕನಸು ಕಾಣಬೇಡಿ. ಏಕೆಂದರೆ, ಈ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನಾನು ಹೀರೋ ರೀತಿ ನಿಮಗೆ ಕಾಣಬಹುದು. ಆದರೆ, ನನ್ನ ಯಾತ್ರೆಗೆ ಇಂಜಿನಿಯರ್, ವೈದ್ಯರು ಸೇರಿ ಸಾವಿರಾರೂ ಮಂದಿ ಕೆಲಸ ಮಾಡಿದ್ದಾರೆ. ಅವರಂತೆಯೂ ನೀವು ಆಗಬಹುದು ಎಂದರು.
ತಾಳ್ಮೆ ಬಹಳ ಮುಖ್ಯ:
ನನಗೆ ಸಾಕಷ್ಟು ಸ್ಪೂರ್ತಿದಾಯಕರಿದ್ದಾರೆ. ಗಗನಯಾನಿ ರಾಕೇಶ್ ಶರ್ಮಾ ಅವರಿಂದ ಸಾಕಷ್ಟು ಕಲಿತಿದ್ದೇನೆ. ಜೀವನದಲ್ಲಿ ಗುರಿ ಮತ್ತು ಛಲ ಮುಖ್ಯವಾಗಿ ತಾಳ್ಮೆ ಇರಬೇಕು. ನಾನು 20 ದಿನಗಳ ಯಾತ್ರೆಗೆ 5 ವರ್ಷಗಳ ತರಬೇತಿ ಪಡೆದಿದ್ದೇನೆ. ಗಗನಯಾನ ಅಂದುಕೊಂಡಷ್ಟು ಸುಲಭವಾಗಿಲ್ಲ. ಹೊಸ ವಾತಾವರಣಕ್ಕೆ ಹೊಂದುಕೊಳ್ಳುವುದು ತೀರಾ ಕಷ್ಟ. ಬಾಹ್ಯಾಕಾಶಕ್ಕೆ ಹೋದ ಮೇಲೆ ಗಾಳಿಯಲ್ಲಿ ತೇಲಾಡುವುದು ಅಭ್ಯಾಸ ಮಾಡಿಕೊಂಡೆ. ಅಲ್ಲಿ ಹಲವಾರು ಸಂಶೋಧನೆಗಳನ್ನು ಕೈಗೊಳ್ಳಲಾಯಿತು. ಭೂಮಿಗೆ ಬರುವಾಗ ತುಂಬಾ ಕಷ್ಟವಾಗಿತ್ತು. ಬಂದ ಮೇಲೆ ಒಂದು ವಾರದವರೆಗೆ ನೇರವಾಗಿ ನಿಂತುಕೊಳ್ಳುವುದಕ್ಕೆ ಸಹ ಆಗುತ್ತಿರಲಿಲ್ಲ ಎಂದು ತಮ್ಮ ಅನುಭವನಗಳನ್ನು ತಿಳಿಸಿದರು.
ಸಮಾರಂಭದಲ್ಲಿ ಸಚಿವರಾದ ಎನ್.ಎಸ್.ಬೋಸರಾಜು, ಮಧು ಬಂಗಾರಪ್ಪ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್. ಮಂಜುಳಾ, ತಾರಾಲಯದ ನಿರ್ದೇಶಕ ಡಾ. ಬಿ.ಆರ್.ಗುರುಪ್ರಸಾದ್ ಹಾಜರಿದ್ದರು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕಾಲಿಟ್ಟಾಗ, ನೀವು ಕೇವಲ ರಾಷ್ಟ್ರಧ್ವಜವನ್ನೇ ಅಲ್ಲ, ಎಲ್ಲ ಭಾರತೀಯರ ಕನಸುಗಳನ್ನು ಕೂಡ ನಿಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದು, ನಮ್ಮ ದೇಶಕ್ಕೆ ಹೆಮ್ಮೆ ತಂದಿದೆ. ಕರ್ನಾಟಕದ ಗ್ರಾಮೀಣ ಪ್ರದೇಶದ ಮಗುವೊಂದು ರಾತ್ರಿ ಆಕಾಶ ನೋಡಿದಾಗ, ಅದು ಮುಂದಿನ ಕಲ್ಪನಾ ಚಾವ್ಲಾ, ಸುನಿತಾ ವಿಲಿಯಮ್ಸ್ ಅಥವಾ ಶುಭಾಂಶು ಶುಕ್ಲಾ ಆಗುವ ಕನಸು ಕಾಣಬೇಕು.
ನಮ್ಮ ಮಕ್ಕಳನ್ನು ಶುಭಾಂಶು ಶುಕ್ಲಾ ಆಗಿ ರೂಪಿಸಲು ನಾವು ಸಿದ್ಧರಾಗಿದ್ದೇವೆ. ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸಿ, ಸರಕಾರಿ ಶಾಲಾ ಮಕ್ಕಳಿಗಾಗಿ ಕಂಪ್ಯೂಟರ್‌ಗಳನ್ನು ನೀಡಲಾಗುತ್ತಿದ್ದು, ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ. ಕನಸು ಕಾಣುವುದಕ್ಕೆ ಯಾವುದೇ ಮಿತಿ ಇಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು.