ಜಯದೇವ ಆಸ್ಪತ್ರೆಯಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾದ ಪಿಲಿಫೈನ್ಸ್ ಮೂಲದ 2 ವರ್ಷದ ಅವಿಯನ್ ಅಲಿನ್ ಜೇಡ್ ಅಮೊರೊಸೋರೇ ಜತೆ ಪಾಲಕರು, ಆಸ್ಪತ್ರೆ ನಿರ್ದೇಶಕ ಡಾ.ಬಿ. ದಿನೇಶ್, ಚಿಕಿತ್ಸೆ ನಡೆಸಿದ ವೈದ್ಯರ ತಂಡ. 
ರಾಜ್ಯ

ಜಯದೇವ ಆಸ್ಪತ್ರೆಯಲ್ಲಿ ಪಿಲಿಫೈನ್ಸ್ ಮಗುವಿಗೆ ಚಿಕಿತ್ಸೆ

ಪ್ರಮುಖ ಮುಖ್ಯಾಂಶಗಳು

  • ಟೆಒಎಫ್ ಸಮಸ್ಯೆ ಹೊಂದಿದ್ದ ಫಿಲಿಫೈನ್ಸ್ ದೇಶದ ಮಗು
  • ಜಯದೇವ ಆಸ್ಪತ್ರೆಯ ಮಕ್ಕಳ ವೈದ್ಯರಿಂದ ಯಶಸ್ಚಿ ಚಿಕಿತ್ಸೆ
  • ತೆರೆಯ ಹೃದಯ ಶಸ್ತ್ರಚಿಕಿತ್ಸೆ ಯಶಸ್ಸಿಗೆ ವೈದ್ಯರಿಗೆ ಅಭಿನಂದನೆ
ಬೆಂಗಳೂರು: ಜನ್ಮಜಾತ ಹೃದಯ ಕಾಯಿಲೆಯಾದ ಟೆಟ್ರಾಲಜಿ ಆಫ್ ಫಲ್ಲಾಟ್(ಟಿಒಎಫ್)ನಿಂದ ಬಳಲುತ್ತಿದ್ದ ಪಿಲಿಫೈನ್ಸ್ ಮೂಲದ ಎರಡು ವರ್ಷದ ಅವಿಯನ್ ಅಲಿನ್ ಜೇಡ್ ಅಮೊರೊಸೋರೇ ಎಂಬ ಮಗುವಿಗೆ ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಸಂಸ್ಥೆಯ ನಿರ್ದೇಶಕ ಡಾ.ಬಿ. ದಿನೇಶ್, ಅನಾರೋಗ್ಯದಿಂದಾಗಿ ಫಿಲಿಫೈನ್ಸ್ ಹಾರ್ಟ್ ಸೆಂಟರ್‌ನಲ್ಲಿ ದಾಖಲಾಗಿದ್ದ ಮಗುವನ್ನು ತಪಾಸಣೆ ಮಾಡಿದ ವೈದ್ಯರು ಟೆಟ್ರಾಲಜಿ ಆಫ್ ಫಲ್ಲಾಟ್ ಸಮಸ್ಯೆ ಇರುವುದನ್ನು ಪತ್ತೆ ಹಚ್ಚಿದ್ದರು. ಆದರೆ, ಅಲ್ಲಿ ಅಗತ್ಯ ಚಿಕಿತ್ಸಾ ಸೌಲಭ್ಯ ಇಲ್ಲದ ಕಾರಣ ರೋಟರಿ ಸಂಸ್ಥೆಯು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಜಯದೇವ ಆಸ್ಪತ್ರೆಗೆ ದಾಖಲಿಸುವಂತೆ ಕೋರಿ ಇಮೇಲ್ ಮೂಲಕ ಮಗುವಿನ ಪರೀಕ್ಷಾ ವರದಿಯನ್ನು ಕಳುಹಿಸಿಕೊಟ್ಟಿತ್ತು. ವರದಿ ಪರಿಶೀಲಿಸಿದ ಆಸ್ಪತ್ರೆಯ ಮಕ್ಕಳ ಹೃದ್ರೋಗ ವಿಭಾಗದ ತಜ್ಞರ ತಂಡ ಮಗುವನ್ನು ಆಸ್ಪತ್ರೆಗೆ ದಾಖಲಿಸಲು ಸೂಚಿಸಿತ್ತು ಎಂದರು.
ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ತೀವ್ರ ಉಸಿರಾಟದ ಸಮಸ್ಯೆ, ಸೈನೋಸಿಸ್ ಹಾಗೂ ತೀವ್ರ ದಣಿವಿನಿಂದ ಮಗು ಬಳಲಿತ್ತು. ಜತೆಗೆ ವೈದ್ಯಕೀಯ ತಪಾಸಣೆ ವೇಳೆ ಸ್ಯಾಚುರೇಶನ್ ಪ್ರಮಾಣ ಕೇವಲ ಶೇ.75 ಇತ್ತು. ನ.1ರಂದು ದಾಖಲಾದ ಮಗುವಿಗೆ ಅಗತ್ಯ ಪರೀಕ್ಷೆಗಳನ್ನು ನಡೆಸಿ ನ.10ರಂದು ತೆರೆದ ಹೃದಯ ಶಸ್ತ್ರಚಿಕಿತ್ಸೆ (ಟಿಒಎಫ್ ರಿಪೇರಿ- ಐಸಿಆರ್, ವಿಎಸ್‌ಡಿ ಕ್ಲೋಷರ್, ಆರ್‌ವಿಒಟಿ ರಿಸೆಕ್ಷನ್ ಮತ್ತು ಬಲ ಎಟ್ರಿಯಲ್ ಅಪೆಂಡೇಜ್ ಮರುನಿರ್ಮಾಣ) ನಡೆಸಲಾಯಿತು. ಚಿಕಿತ್ಸೆ ನಂತರ ಮಗುವಿನ ಆರೋಗ್ಯ ಸಂಪೂರ್ಣ ಸುಧಾರಿಸಿದ್ದು, ಬುಧವಾರ (ನ.26) ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು ಎಂದು ತಿಳಿಸಿದರು.
ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದಮಕ್ಕಳ ಹೃದ್ರೋಗ ತಜ್ಞರಾದ ಪ್ರೊ. ಡಾ. ಜಯರಂಗನಾಥ, ಪ್ರೊ. ಡಾ. ಪಿ.ಕೆ. ಸುನೀಲ್, ಡಾ. ರಶ್ಮಿ ಎ. ಕೋಟೆಚಾ, ಡಾ. ಹರೀಶ್ ಮಹಾಬಲ ಮುಖ್ರಿ ಹಾಗೂ ಹೃದಯದ ಅರಿವಳಿಕೆ ತಜ್ಞೆ ಪ್ರೊ. ಡಾ. ಪರಿಮಳ ಪ್ರಸನ್ನ ಸಿಂಹ ಅವರನ್ನು ಒಳಗೊಂಡು ವೈದ್ಯರ ತಂಡವನ್ನು ಡಾ. ದಿನೇಶ್ ಇದೇ ವೇಳೆ ಅಭಿನಂದಿಸಿದರು.