ಫಾರ್ಮಸಿ ಡಿಪ್ಲೊಮಾ: ಅಪ್ರೆಂಟಿಸ್ ಗಳಾಗಿ ನೇಮಕ  
ರಾಜ್ಯ

ಫಾರ್ಮಸಿ ಡಿಪ್ಲೊಮಾ: ಅಪ್ರೆಂಟಿಸ್ ಗಳಾಗಿ ನೇಮಕ

ಪಂಕಜ ಕೆ.ಎಂ.

ಪ್ರಮುಖ ಮುಖ್ಯಾಂಶಗಳು

  • 11 ತಿಂಗಳ ಅವಧಿಗೆ ಅಪ್ರೆಂಟಿಸ್‌ಗಳಾಗಿ ನೇಮಕ
  • ಆರ್ಥಿಕ ಇಲಾಖೆಯಿಂದ 400 ಫಾರ್ಮಸಿಸ್ಟ್ ಹುದ್ದೆಗಳ ನೇಮಕಕ್ಕೆ ಒಪ್ಪಿಗೆ
  • ಡಿ.ಫಾರ್ಮ ಪೂರ್ಣಗೊಳಿಸಿದವರು ಅರ್ಜಿ ಸಲ್ಲಿಕೆಗೆ ಅರ್ಹರು
ಬೆಂಗಳೂರು: ಫಾರ್ಮಸಿ ಡಿಪ್ಲೊಮಾ ಮಾಡಿರುವ ಒಂದು ಸಾವಿರ ಮಂದಿಯನ್ನು ಖಾಲಿ ಇರುವ ಫಾರ್ಮಸಿಸ್ಟ್ ಹುದ್ದೆಗಳಿಗೆ 11 ತಿಂಗಳ ಅವಧಿಗೆ ಅಪ್ರೆಂಟಿಸ್‌ಗಳಾಗಿ (ಪ್ರಾಯೋಗಿಕ ತರಬೇತಿ) ನೇಮಕ ಮಾಡಿಕೊಳ್ಳಲು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.
ರಾಜ್ಯದಲ್ಲಿ ಪ್ರತಿ ವರ್ಷ 18 ಸಾವಿರ ಡಿ.ಫಾರ್ಮ ಮತ್ತು 8 ಸಾವಿರ ಬಿ.ಫಾರ್ಮ ಪದವಿ ಪಡೆದವರು ಹೊರಬರುತ್ತಿದ್ದಾರೆ. ಅವರಲ್ಲಿ ಸುಮಾರು 5 ಸಾವಿರ ಡಿ.ಫಾರ್ಮ ಮತ್ತು 4 ಸಾವಿರ ಬಿ.ಫಾರ್ಮ ವಿದ್ಯಾರ್ಥಿಗಳು ಕರ್ನಾಟಕದವರಾಗಿದ್ದಾರೆ. ಆರೋಗ್ಯ ಇಲಾಖೆಯಡಿ ಇರುವ 3 ಸಾವಿರ ಫಾರ್ಮಾಸಿಸ್ಟ್ ಹುದ್ದೆಗಳಲ್ಲಿ ಶೇ. 50 ಖಾಲಿಯಿವೆ. ಆರ್ಥಿಕ ಇಲಾಖೆಯು ಇತ್ತೀಚೆಗೆ 400 ಫಾರ್ಮಸಿಸ್ಟ್ ಹುದ್ದೆಗಳನ್ನು ಒಪ್ಪಂದದ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಅನುಮತಿ ನೀಡಿದೆ.
ಅದರಂತೆ ಹೆಚ್ಚು ರೋಗಿಗಳಿರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸದರಿ ಕೆಲಸವನ್ನು ಖಾಯಂ ಫಾರ್ಮಸಿಸ್ಟ್‌ಗಳ ಮೇಲ್ವಿಚಾರಣೆಯಲ್ಲಿ ಅಪ್ರೆಂಟಿಸ್ ಾರ್ಮಸಿಸ್ಟ್‌ಗಳ ಮೂಲಕ ನಿರ್ವಹಿಸಬಹುದಾಗಿದ್ದು, ಅಪ್ರೆಂಟಿಸ್ ಕಾರ್ಯಕ್ರಮದಡಿ ಖಾಲಿ ಹುದ್ದೆಗಳಿಗೆ ನೇಮಕ ಮಾಡಿಕೊಂಡು, 11 ತಿಂಗಳ ಅವಧಿಗೆ ನಿಗದಿತ ಮೊತ್ತದ ಸ್ಟೈಫಂಡ್ ಒದಗಿಸಬೇಕು ಎಂದು ತಿಳಿಸಲಾಗಿದೆ.
ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಡಿ.ಫಾರ್ಮ ಪೂರ್ಣಗೊಳಿಸಿದ ಎಲ್ಲ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಎಂದು ಆದೇಶದಲ್ಲಿ ಹೇಳಲಾಗಿದೆ. ಅಭ್ಯರ್ಥಿಗಳಿಗೆ ನೋಂದಾಯಿತ ಫಾರ್ಮಸಿಸ್ಟ್ (ಅಪ್ರೆಂಟಿಸ್ ಮಾಸ್ಟರ್) ಅಡಿಯಲ್ಲಿ ತರಬೇತಿ ನೀಡಲಾಗುತ್ತದೆ. ಪರೀಕ್ಷಾ ಪ್ರಾಧಿಕಾರದ ಮಂಡಳಿಯ ಅಧ್ಯಕ್ಷರು ಮತ್ತು ಪರೀಕ್ಷಾ ಪ್ರಾಧಿಕಾರದ ಮಂಡಳಿಯ ಸದಸ್ಯ ಕಾರ್ಯದರ್ಶಿಗಳ ನೇತೃತ್ವದ ಸಮಿತಿಯು ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆಯ ಆಧಾರದ ಮೇರೆಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗುತ್ತದೆ ಎಂದು ಆದೇಶದಲ್ಲಿ ಹೇಳಲಾಗಿದೆ.