ವೈದ್ಯಕೀಯ ಕೋರ್ಸ್‌ಗಳ ಪ್ರವೇಶ ನಿಯಮಗಳಿಗೆ ತಿದ್ದುಪಡಿ 
ರಾಜ್ಯ

ಪಿಜಿ ಮೆಡಿಕಲ್ ಪ್ರವೇಶಾತಿ ನಿಯಮ ತಿದ್ದುಪಡಿ: ಕನ್ನಡೇತರರಿಗೆ ಹೆಚ್ಚು ಸೀಟು?

ಪ್ರಮುಖ ಮುಖ್ಯಾಂಶಗಳು

  • ಪ್ರವೇಶ ಪರೀಕ್ಷೆ ನಡೆಸುವ ನಿಯಮಗಳು-2006 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು ನಿಯಮಗಳನ್ನು ರೂಪಿಸಿ ತಿದ್ದುಪಡಿ ಅಧಿಸೂಚನೆ ಹೊರಡಿಸಲಾಗಿದೆ.
  • ಖಾಸಗಿ ಕಾಲೇಜುಗಳಲ್ಲಿನ ಶೇ.50ರಷ್ಟು ಸಂಸ್ಥೆಗಳ ಸೀಟುಗಳನ್ನು ಪಡೆಯುವ ನಿಯಮಗಳಲ್ಲಿ ಬದಲಾವಣೆ
  • ಸರ್ಕಾರಿ ಕಾಲೇಜುಗಳ ಪ್ರವೇಶಾತಿಗೆ ನಿರ್ದಿಷ್ಟಪಡಿಸಿದ ಅರ್ಹತೆಯನ್ನೇ ಖಾಸಗಿ ಕಾಲೇಜುಗಳಲ್ಲಿಯೂ ಹೊಸ ನಿಯಮಗಳನ್ನು ರೂಪಿಸಿ ಜಾರಿ
ಬೆಂಗಳೂರು ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪದವಿ ಹಾಗೂ ಡಿಪ್ಲೊಮಾ ಕೋರ್ಸ್‌ಗಳ ಆಯ್ಕೆ ಮತ್ತು ಪ್ರವೇಶ ನಿಯಮಗಳಿಗೆ ಸರ್ಕಾರವು ನಿಯಮಗಳನ್ನು ತಿದ್ದುಪಡಿ ಮಾಡಿದ್ದು, ಕನ್ನಡೇತರರಿಗೆ ಹೆಚ್ಚು ಸೀಟುಗಳು ದೊರೆಯಲಿವೆಯೇ ಎಂಬ ಆತಂಕ ವ್ಯಕ್ತವಾಗಿದೆ.
ರಾಜ್ಯ ಸರ್ಕಾರವು ಕರ್ನಾಟಕ ಶಿಕ್ಷಣ ಸಂಸ್ಥೆಗಳ (ಕ್ಯಾಪಿಟೇಷನ್ ಶುಲ್ಕ ನಿಷೇಧ) ಅಧಿನಿಯಮ, 1984ರ (11984ರ ಕರ್ನಾಟಕ ಅಧಿನಿಯಮ-37), 14ನೇ ಪ್ರಕಣರದ (1)ನೇ ಉಪ ಪ್ರಕರಣದ ಮೂಲಕ ಅಧಿಕಾರವನ್ನು ಚಲಾಯಿಸಿ ಪ್ರವೇಶ ಪರೀಕ್ಷೆ ನಡೆಸುವ ನಿಯಮಗಳು-2006 ಅನ್ನು ಮತ್ತಷ್ಟು ತಿದ್ದುಪಡಿ ಮಾಡಲು ನಿಯಮಗಳನ್ನು ರೂಪಿಸಿ ತಿದ್ದುಪಡಿ ಅಧಿಸೂಚನೆ ಹೊರಡಿಸಲಾಗಿದೆ.
ಖಾಸಗಿ ಕಾಲೇಜುಗಳಲ್ಲಿನ ಶೇ.50ರಷ್ಟು ಸಂಸ್ಥೆಗಳ ಸೀಟುಗಳನ್ನು ಪಡೆಯುವ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಸರ್ಕಾರಿ ಕಾಲೇಜುಗಳ ಪ್ರವೇಶಾತಿಗೆ ನಿರ್ದಿಷ್ಟಪಡಿಸಿದ ಅರ್ಹತೆಯನ್ನೇ ಖಾಸಗಿ ಕಾಲೇಜುಗಳಲ್ಲಿಯೂ ಹೊಸ ನಿಯಮಗಳನ್ನು ರೂಪಿಸಿ ಜಾರಿಗೆ ಮುಂದಾಗಿದೆ.

ಬದಲಾವಣೆ ಏನು?

ಪ್ರಸ್ತುತ ಪದವಿ ಮತ್ತು ಸ್ನಾತಕೋತ್ತರ ಪದವಿ ಸೀಟುಗಳ ಪ್ರವೇಶಕ್ಕಾಗಿ ಅಭ್ಯರ್ಥಿಯು 1ರಿಮದ 12ನೇ ತರಗತಿವರೆಗೆ ರಾಜ್ಯದಲ್ಲಿ ವ್ಯಾಸಂಗ ಮಾಡಿರಬೇಕು ಅಥವಾ ಎಂಬಿಬಿಎಸ್ ಪದವಿಯನ್ನು ರಾಜ್ಯದ ಯಾವುದೇ ಕಾಲೇಜಿನಲ್ಲಿ ಅಭ್ಯಾಸ ಮಾಡಿದ್ದಲ್ಲಿ (ಹೊರ ರಾಜ್ಯದ ಅಭ್ಯರ್ಥಿಯಾಗಿದ್ದರೂ) ಸ್ನಾತಕೋತ್ತರ ಪದವಿ ಕಾಲೇಜುಗಳ ಪ್ರವೇಶಾತಿಯಲ್ಲಿ ಶೇ.50 ಸೀಟುಗಳಲ್ಲಿ ರಾಜ್ಯದ ಅಭ್ಯರ್ಥಿಯಾಗಿ ಪರಿಗಣಿಸಲಾಗುತ್ತದೆ.
ಹೊಸ ನಿಯಮಗಳ ಪ್ರಕಾರ, ಈ ಎರಡು ಅರ್ಹತೆ ಜತೆಗೆ ಅಭ್ಯರ್ಥಿಯ ತಂದೆ/ತಾಯಿಯು ಮೂಲತಃ ಕರ್ನಾಟಕದವರಾಗಿದ್ದು, ಮಿಲಿಟರಿ ಸೇವೆ ಅಥವಾ ದೆಹಲಿ ಸೇರಿ ದೇಶದ ಯಾವುದೇ ರಾಜ್ಯಗಳಲ್ಲಿ ಸಂಸದೀಯ ವ್ಯವಹಾರಗಳು, ರಾಜಕೀಯ ಪ್ರತಿನಿಧಿಗಳಾಗಿ ಹೊರ ರಾಜ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವವರ ಮಕ್ಕಳಿಗೂ ಕರ್ನಾಟಕದಲ್ಲಿ ಸ್ನಾತಕೋತ್ತರ ಸೀಟುಗಳ ಪ್ರವೇಶಾತಿಯ ಸಂಸ್ಥೆಯ ಶೇ.50ಗಳಿಗೆ ಅರ್ಹತೆ ಪಡೆಯುವಂತೆ ನಿಯಮ ರೂಪಿಸಲಾಗಿದೆ.
ಇದರಿಂದ ಕನ್ನಡೇತರರು ರಾಜ್ಯದಲ್ಲಿ ಸೀಟು ಪಡೆಯುವವರ ಸಂಖ್ಯೆ ಹೆಚ್ಚಳವಾಗಲಿದೆಯೇ ಎಂಬ ಲೆಕ್ಕಾಚಾರ ಅಭ್ಯರ್ಥಿಗಳಲ್ಲಿ ಮೂಡಿದೆ. ಇದರಿಂದ ರಾಜ್ಯದ ಅಭ್ಯರ್ಥಿಗಳ ಕಳವಳಕ್ಕೆ ಕಾರಣವಾಗಿದೆ.
ಈಗಾಗಲೇ ನೀಟ್ ಪ್ರವೇಶಾತಿ ನಡೆಸುತ್ತಿರುವ ಕಾರಣ ಹೊರ ರಾಜ್ಯದ ಅಭ್ಯರ್ಥಿಗಳೇ ಹೆಚ್ಚಿನ ಸೀಟು ಪಡೆಯುತ್ತಿದ್ದಾರೆ. ಇನ್ನು ನಿಯಮಗಳನ್ನು ಕೂಡ ಸಡಿಲಿಸುವುದರಿಂದ ಮತ್ತಷ್ಟು ಸೀಟುಗಳು ಕೈತಪ್ಪಲಿವೆ ಎಂಬುದು ಅಭ್ಯರ್ಥಿಗಳ ಅಭಿಪ್ರಾಯವಾಗಿದೆ.