ಕರ್ನಾಟಕ ಪರೀಕ್ಷಾ ಪ್ರಾಧಿಕಾರ 
ರಾಜ್ಯ

ಪಿಜಿ ಡೆಂಟಲ್: ಸೆ.19ರಿಂದ 2ನೇ ಸುತ್ತಿನ ಕೌನ್ಸೆಲಿಂಗ್

ಬೆಂಗಳೂರು: ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್‌ನ ಎರಡನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ಪ್ರಕಟಿಸಿದ್ದು, ಶನಿವಾರದಿಂದ ಪ್ರಕ್ರಿಯೆ ಆರಂಭವಾಗಲಿದೆ.
ಮೊದಲ ಸುತ್ತಿನಲ್ಲಿ ಚಾಯ್ಸ್-3 ಆಯ್ಕೆ ಮಾಡಿರುವ ಹಾಗೂ ಇತರ ಚಾಯ್ಸ್ ದಾಖಲಿಸಿರುವ ಅಭ್ಯರ್ಥಿಗಳು ಎರಡನೇ ಸುತ್ತಿಗೆ ಅರ್ಹತೆ ಪಡೆಯಲು ಸೆ.19ರಿಂದ 22ರವರೆಗೆ ಒಂದು ಲಕ್ಷ ರೂ. (ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳು 50 ಸಾವಿರ ರೂ.) ಕಾಷನ್ ಡೆಪಾಸಿಟ್ ಪಾವತಿಸಬೇಕು. ಅದರ ಬಳಿಕವೇ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಮೊದಲ ಸುತ್ತಿನಲ್ಲಿ ಚಾಯ್ಸ-2 ಆಯ್ಕೆ ಮಾಡಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಕಾಷನ್ ಡೆಪಾಸಿಟ್ ಮಾಡುವ ಅಗತ್ಯ ಇರುವುದಿಲ್ಲ. ಈ ಸುತ್ತಿನಲ್ಲಿ ಸೀಟು ಹಂಚಿಕೆಯಾದಲ್ಲಿ ಅಭ್ಯರ್ಥಿಯು ಪಾವತಿಸಿರುವ ಕಾಷನ್ ಡೆಪಾಸಿಟ್ ಅನ್ನು ಶುಲ್ಕಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಅವರು ವಿವರಿಸಿದ್ದಾರೆ.
ಸೆ.19ರಂದು ಬೆಳಗ್ಗೆ 11ಕ್ಕೆ ಸೀಟ್ ಮ್ಯಾಟ್ರಿಕ್ಸ್ ಪ್ರಕಟಿಸಲಾಗುತ್ತದೆ. ಸೆ.19ರಿಂದ 23ರವರೆಗೆ ಆಪ್ಷನ್ಸ್ ಬದಲಿಸಲು/ಅಳಿಸಲು/ಮಾರ್ಪಡಿಸಲು ಅವಕಾಶ ನೀಡಲಾಗಿದೆ. ಸೆ.23ರಂದು ಸಂಜೆ 4ಕ್ಕೆ ತಾತ್ಕಾಲಿಕ ಹಾಗೂ ಸೆ.24ರಂದು ಬೆಳಿಗ್ಗೆ 10ಕ್ಕೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ. ಸೆ.24ರಿಂದ 28ರವರೆಗೆ ಚಲನ್ ಡೌನ್‌ಲೋಡ್ ಮಾಡಿಕೊಂಡು ಶುಲ್ಕ ಪಾವತಿಸಬೇಕು. ಮೂಲ ದಾಖಲೆಗಳನ್ನು ಕೆಇಎ ಕಚೇರಿಯಲ್ಲಿ ಖುದ್ದು ಸಲ್ಲಿಸಬೇಕು. ಕಾಲೇಜುಗಳಲ್ಲಿ ದಾಖಲಾಗಲು ಸೆ. 29 ಕೊನೆಯ ದಿನವಾಗಿದೆ ಎಂದು ವಿವರಿಸಿದ್ದಾರೆ.