Petrol, diesel prices rise due to war 
ರಾಜ್ಯ

ಯುದ್ಧದಿಂದ ಪೆಟ್ರೋಲ್​, ಡೀಸೆಲ್​ ದರ ಏರಿಕೆ

ಗುಬ್ಬಿ: ತಾಲೂಕಿನ ಹಲವು ಕಾಮಗಾರಿಗೆ ಜಿಲ್ಲೆಯಲ್ಲಿ ನಡೆಯುವ ರಾಜ್ಯ ಸರ್ಕಾರದ ಸಾಧನ ಸಮಾವೇಶದಲ್ಲಿ ಮುಖ್ಯಮಂತ್ರಿ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಎಸ್​.ಆರ್​.ಶ್ರೀನಿವಾಸ್​ ತಿಳಿಸಿದರು.
ಪಟ್ಟಣದ ಕೆ.ಜಿ.ಟೆಂಪಲ್​ ಬಳಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿ, ರಾಜ್ಯ ಸರ್ಕಾರಕ್ಕೆ ಮೂರು ವರ್ಷದ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಮೇ 20ರಂದು ಸಾಧನ ಸಮಾವೇಶ ಹಾಗೂ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಕಾರ್ಯಕ್ರಮ ನಡೆಯಲಿದೆ. ಈ ಸಮಾವೇಶದಲ್ಲಿ ಗುಬ್ಬಿ ತಾಲೂಕು ರಾಜ್ಯದಲ್ಲಿಯೇ ಅತಿ ಹೆಚ್ಚು ಕಂದಾಯ ಗ್ರಾಮ ರಚನೆಯಲ್ಲಿ ಪೌತಿ ಖಾತೆ ಆಂದೋಲನದಲ್ಲಿಯೂ ಅತಿ ಹೆಚ್ಚು ಪೌತಿ ಖಾತೆ ಮಾಡಿ ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದೆ. ಈ ಸಮಾವೇಶದಲ್ಲಿ ಫಲಾನುಭವಿಗಳಿಗೆ ಹಕ್ಕುಪತ್ರವನ್ನು ನೀಡುತ್ತಿದ್ದು, 94 ಅಂಗನವಾಡಿ ಕೇಂದ್ರಗಳ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಕೆಪಿಟಿಸಿಎಲ್​ ಇಲಾಖೆಯಿಂದ 220 ಮೆಗಾವ್ಯಾಟ್​ ವಿದ್ಯುತ್​ ಸ್ಥಾವರಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಯುದ್ಧ ನಡೆಯುತ್ತಿರುವುದರಿಂದ ಬೆಲೆಯು ಜಾಸ್ತಿಯಾಗಲಿದೆ. ಹಾಗಾಗಿ ಕಾಮಗಾರಿ ಮಾಡಲು ಗುತ್ತಿಗೆದಾರರು ಮೀನಮೇಷ ಮಾಡುತ್ತಿದ್ದಾರೆ. ಯುದ್ಧದಿಂದ ಪೆಟ್ರೋಲ್​, ಡೀಸೆಲ್​ ಗ್ಯಾಸ್​ ದರ ಏರಿಕೆ ಆಗಲಿದೆ, ಪಂಚ ರಾಜ್ಯಗಳ ಚುನಾವಣೆ ಇದ್ದ ಕಾರಣ ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿಲ್ಲ. ಇದೀಗ ಬೆಲೆ ಏರಿಕೆ ಮಾಡಲಿದ್ದಾರೆ ಎಂದು ತಿಳಿಸಿದರು.
ನಗರದಲ್ಲಿ ವೈಟ್​ ಟ್ಯಾಪಿಂಗ್​ ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಕಾರ 140 ವಿಸ್ತರಣೆ ಆಗಬೇಕಾಗುತ್ತದೆ. ಆಗ ನಿಯಮದ ಪ್ರಕಾರ ರಸ್ತೆ ವಿಸ್ತರಣೆ ಸ್ವಾಭಾವಿಕವಾಗಿ ಮಾಡಬೇಕಾಗುತ್ತದೆ, ಜತೆಗೆ ಬಾಕ್ಸ್​ ಚರಂಡಿ ನಿಮಾರ್ಣ ಮಾಡಿದಾಗ ಪಾದಚಾರಿಗಳು ಓಡಾಡಲು ಅನುಕೂಲವಾಗುತ್ತದೆ. ರಸ್ತೆ ವಿಸ್ತರಣೆ ಬಗ್ಗೆ ವರ್ತಕರು ಬೇಡ ಎಂದು ಹೇಳುತ್ತಿದ್ದಾರೆ. ಆದರೆ ಪಾದಚಾರಿಗಳು ಓಡಾಡಲು ಹಾಗೂ ಚರಂಡಿ ನಿಮಾರ್ಣ ಮಾಡಬೇಕಾಗಿದ್ದು, ಈ ಬಗ್ಗೆ ಇನ್ನೂ ಯಾವುದೇ ರೀತಿಯ ಆಲೋಚಿಸಿಲ್ಲ. ಸಾರ್ವಜನಿಕರು ಹಾಗೂ ವರ್ತಕರ ಜತೆ ಸಭೆ ಕರೆದು ಚರ್ಚೆ ನಡೆಸಿ ತೀಮಾರ್ನ ಕೈಗೊಳ್ಳಲಾಗುವುದು ಎಂದರು.
ಇದೇ ವೇಳೆ ಕೆ.ಜಿ.ಟೆಂಪಲ್​, ಕಾಳೇನಹಳ್ಳಿಯಿಂದ ಚಿಂದಯ್ಯನ ಪಾಳ್ಯ, ದೊಡ್ಡ ಕಟ್ಟಿಗೇನಹಯಲ್ಲಿ ರಸ್ತೆ ಕಾಮಗಾರಿಗೆ ಹಾಗೂ 54 ಲಕ್ಷ ರೂ. ವೆಚ್ಚದಲ್ಲಿ ಆಯುಷ್ಮಾನ್​ ಆರೋಗ್ಯ ಮಂದಿರ ಕಾಮಗಾರಿಗೆ ಚಾಲನೆ ನೀಡಲಾಯಿತು.
ಮೋದಿ ಮಾತು ಕೇಳುವವರು ಮೂರ್ಖರು: ಪ್ರಧಾನಿ ಮೋದಿ ಅವರು ಹೇಳಿದಂತೆ ಜನತೆಯು ಮಾಡಿಕೊಂಡು ಬಂದಿದ್ದು, ಕೋವಿಡ್​ ಸಂದರ್ಭದಲ್ಲಿ ತಮಟೆ ಹೊಡೆಯಲು, ಚಪ್ಪಾಳೆ ತಟ್ಟಲು, ದೀಪ ಹಚ್ಚಲು ಹೇಳಿದಂತೆ ಜನತೆಯು ಮಾಡಿದ್ದಾರೆ. ಮೋದಿ ಅವರು ಹೇಳಿದಂತೆ ಕೇಳುವ ಜನತೆ ಮೂರ್ಖರು ಎಂದು ತಿಳಿಸಿದರು.