- ಹೈಕೋರ್ಟ್ ಮೆಟ್ಟಿಲೇರಿರುವ ನಗರ ಸಹಕಾರ ಬ್ಯಾಂಕುಗಳ ಒಕ್ಕೂಟ
- ಅಧಿಕಾರಾವಧಿ ರ್ನಿಬಂಧಕ್ಕೆ ಆಕ್ಷೇಪ
ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಮೇ 25ರಂದು ಹೊರಡಿಸಿರುವ ನಗರ ಸಹಕಾರಿ ಬ್ಯಾಂಕ್ಗಳ ಆಡಳಿತ ತಿದ್ದುಪಡಿ ನಿರ್ದೇಶನಗಳು ಮತ್ತು 2025ರ ಬ್ಯಾಂಕಿಂಗ್ ಕಾನೂನುಗಳ ತಿದ್ದುಪಡಿ ಕಾಯ್ದೆಯ ಕೆಲ ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ.
ರಾಜ್ಯ ನಗರ ಸಹಕಾರ ಬ್ಯಾಂಕುಗಳ ಒಕ್ಕೂಟ ಸಲ್ಲಿಸಿರುವ ಅರ್ಜಿಯನ್ನು ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಜುಲೈಗೆ ನಿಗದಿಪಡಿಸಿದೆ. ಆರ್ಬಿಐ ಕೇವಿಯಟ್ ಅರ್ಜಿ ಸಲ್ಲಿಸಿದ್ದು, ತಮ್ಮ ವಾದ ಆಲಿಸದೆ ಯಾವುದೇ ಮಧ್ಯಂತರ ಆದೇಶಗಳನ್ನು ಹೊರಡಿಸಬಾರದು ಎಂದು ಮನವಿ ಸಲ್ಲಿಸಿದೆ.
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ತಂದು ನಗರ ಸಹಕಾರಿ ಬ್ಯಾಂಕ್ಗಳ (ಯುಸಿಬಿ) ನಿರ್ದೇಶಕರ ನಿರಂತರ ಅಧಿಕಾರಾವಧಿಗೆ ಕಟ್ಟುನಿಟ್ಟಿನ ರ್ನಿಬಂಧ ಮತ್ತು ಕೂಲಿಂಗ್ ಆಫ್ ಅವಧಿಯನ್ನು ಕಡ್ಡಾಯಗೊಳಿಸಿರುವ ಕ್ರಮವನ್ನ ಪ್ರಶ್ನಿಸಲಾಗಿದೆ. ಸಹಕಾರ ಸಂಘಗಳು ರಾಜ್ಯ ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ. ಆದ್ದರಿಂದ ಕರ್ನಾಟಕ ಸಹಕಾರ ಸಂಗಳ ಕಾಯ್ದೆ ಅಡಿಯಲ್ಲಿ ನೋಂದಾಯಿಸಲಾದ ಸಹಕಾರಿ ಬ್ಯಾಂಕುಗಳ ನಿರ್ದೇಶಕರ ಮೇಲೆ ಇಂತಹ ರ್ನಿಬಂಧಗಳನ್ನು ವಿಧಿಸಲು ಸಂಸತ್ತಿಗೆ ಅಥವಾ ಆರ್ಬಿಐಗೆ ಯಾವುದೇ ಅಧಿಕಾರ ಇಲ್ಲ ಅರ್ಜಿಯಲ್ಲಿ ವಾದಿಸಲಾಗಿದೆ.
ಆರ್ಬಿಐ ಹೊರಡಿಸಿರುವ ನಿರ್ದೇಶನಗಳು ಅರ್ಜಿದಾರರ ಹಕ್ಕುಗಳನ್ನು ಉಲ್ಲಂಘಿಸುತ್ತಿವೆ. ವಿಚಾರಣಾ ಅವಧಿಯಲ್ಲಿ ಈ ನಿರ್ದೇಶನಗಳನ್ನು ಜಾರಿಗೊಳಿಸದಂತೆ ಮಧ್ಯಂತರ ತಡೆ ನೀಡಬೇಕು ಮತ್ತು ಸದಸ್ಯ ಬ್ಯಾಂಕ್ಗಳ ನಿರ್ದೇಶಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ನಿರ್ದೇಶಿಸಬೇಕು ಎಂದು ಒಕ್ಕೂಟವು ಕೋರಿದೆ.
ನಿರ್ದೇಶನದ ಪ್ರಮುಖಾಂಶಗಳು:
ನಗರ ಸಹಕಾರ ಬ್ಯಾಂಕುಗಳ (ಯುಸಿಬಿ) ನಿರ್ದೇಶಕರ ನಿರಂತರ ಎಂಟು ವರ್ಷಗಳ ಅಧಿಕಾರಾವಧಿಯನ್ನು ಹತ್ತು ವರ್ಷಗಳಿಗೆ ಹೆಚ್ಚಿಸಲಾಗಿದೆ. ಕೆಲವು ನಿರ್ದೇಶಕರು ತಮ್ಮ ಅಧಿಕಾರಾವಧಿಯ ರ್ನಿಬಂಧಗಳನ್ನು ತಪ್ಪಿಸಲು ಅಲ್ಪಾವಧಿಗೆ ರಾಜಿನಾಮೆ ನೀಡಿ ಮರುಚುನಾಯಿತರಾಗುವುದನ್ನು ಗಮನಿಸಿರುವ ಆರ್ಬಿಐ, ಇಂತಹ ಕ್ರಮಗಳನ್ನು ತಪ್ಪಿಸಲು ಕಡ್ಡಾಯ ಕೂಲಿಂಗ್-ಆಫ್ ಅವಧಿಯನ್ನು ಜಾರಿಗೆ ತಂದಿದೆ.
ಒಂದೇ ನಗರ ಸಹಕಾರ ಬ್ಯಾಂಕ್ನ ಮಂಡಳಿಯಲ್ಲಿ ಸತತ ಹತ್ತು ವರ್ಷಗಳ ಕಾಲ ಅಧಿಕಾರವಧಿ ಪೂರೈಸಿದ ನಂತರ ಮೂರು ವರ್ಷಗಳ ಕೂಲಿಂಗ್ಆಫ್ ಅವಧಿಯನ್ನು ಪೂರೈಸಬೇಕು. ಈ ಅವಧಿಯಲ್ಲಿ ಬ್ಯಾಂಕ್ನಲ್ಲಿ ಸಾಮಾನ್ಯ ಸದಸ್ಯ ಅಥವಾ ಗ್ರಾಹಕನಾಗಿ ಇರಬಹುದೇ ಹೊರತು ಬೇರೆ ಹುದ್ದೆಯಲ್ಲಿ ಭಾಗಿಯಾಗುವಂತಿಲ್ಲ. ಅರ್ಹರಾಗಿದ್ದರೆ ಬೇರೆ ಬ್ಯಾಂಕ್ಗಳಲ್ಲಿ ನಿರ್ದೇಶಕರಾಗಿ ನೇಮಕಗೊಳ್ಳಲು ಅನುಮತಿಸಲಾಗಿದೆ. ಈ ನಿಯಮಗಳನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.