ಎಸ್. ಗುರುಸ್ವಾಮಿ 
ರಾಜ್ಯ

ಅಬಕಾರಿ ಸಂಘದ ನವೀಕರಣಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಕೆ-Excise association

ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿಚಾರ ಮುಂದಿಟ್ಟುಕೊಂಡು ಸಚಿವ ಆರ್.ಬಿ.ತಿಮ್ಮಾಪುರ ಬದಲಾಯಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿರುವ ಫೆಡರೇಷನ್ ಆಫ್​​​ ವೈನ್ ಮರ್ಚಂಟ್ಸ್ ಅಸೋಸಿಯೇಷನ್‌ಗೆ ಪೂರ್ವಭಾವಿ ಬಜೆಟ್ ಮೀಟಿಂಗ್‌ಗೆ ಸರ್ಕಾರ ಆಹ್ವಾನಿಸಿಲ್ಲ. ಈ ಹಿನ್ನೆಲೆಯಲ್ಲಿ ಮದ್ಯದಂಗಡಿ ಮಾಲೀಕರ ಮತ್ತು ಸರ್ಕಾರ ನಡುವೆ ಮತ್ತೊಂದು ಮುಸುಕಿನ ಗುದ್ದಾಟ ನಡೆಯುವ ಲಕ್ಷಣಗಳು ಗೋಚರಿಸುತ್ತಿವೆ.
ಸಂಘದ ಅಧ್ಯಕ್ಷ ಎಸ್. ಗುರುಸ್ವಾಮಿ ಮಾತನಾಡಿ, 25 ವರ್ಷದಿಂದ ಮದ್ಯದಂಗಡಿ ಮಾಲೀಕರ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿದ್ದೇವೆ. ಪ್ರತಿ ವರ್ಷ ಅಬಕಾರಿ ಇಲಾಖೆಯ ಕುರಿತು ಸರ್ಕಾರ ನಡೆಸುವ ಪೂರ್ವಭಾವಿ ಬಜೆಟ್ ಸಭೆಗೆ ನಮಗೆ ಆಹ್ವಾನಿಸಲಾಗುತ್ತಿತ್ತು. ಆದರೆ, ಈ ಬಾರಿ ಸಂಘವನ್ನು ನವೀಕರಣ ಮಾಡಿಲ್ಲವೆಂದು ಸಭೆಗೆ ಕರೆದಿಲ್ಲ. ಸಂಘವನ್ನು ನವೀಕರಣ ಮಾಡುವಂತೆ ಈಗಾಗಲೇ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಈ ಕುರಿತು ಸರ್ಕಾರ ಅನುಮತಿ ಕೊಟ್ಟಿಲ್ಲ. ಮೈಸೂರು ಮತ್ತು ಚಾಮರಾಜನಗರಕ್ಕೆ ಸೀಮಿತವಾಗಿರುವ ಫೈನಾನ್ಸಿಯಲ್ ಸೊಸೈಟಿಗೆ ಆಹ್ವಾನ ಕೊಟ್ಟಿದ್ದಾರೆ. ನಮ್ಮದು ರಾಜ್ಯ ಮಟ್ಟದ ಸಂಘವಾಗಿದೆ. ಸಾವಿರಾರು ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದು,ಲಂಚಬಾಕ ಅಧಿಕಾರಿಗಳನ್ನು ಅಮಾನತುಗೊಳಿಸುವುದೂ ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಪತ್ರ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಿಎಂ ಸಿದ್ದರಾಮಯ್ಯ ಅವರು ನಮಗೆ ಭರವಸೆ ನೀಡುತ್ತಾರೆ ಹೊರತು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ನೂರಾರು ಮನವಿ ಪತ್ರಗಳನ್ನು ಸಲ್ಲಿಸಿ ನಮಗೆ ಸಾಕಾಗಿದೆ. ಆದ್ದರಿಂದ, ಇಲಾಖೆಯ ಪೂರ್ವಭಾವಿ ಬಜೆಟ್ ಸಭೆಯನ್ನು ಬಹಿಷ್ಕರಿಸಿದ್ದೇವೆ. ಮುಂದಿನ ದಿನಗಳಲ್ಲಿ ಇಲಾಖೆಯಲ್ಲಿ ನಡೆಯುತ್ತಿರುವ ಭ್ರಷ್ಟ್ರಾಚಾರ ತಡೆಗೆ ಇನ್ನಷ್ಟು ಹೋರಾಟ ನಡೆಸಲಾಗುವುದು ಎಂದು ಗುಡುಗಿದರು.