ಸಾಂಧರ್ಭಿಕ ಚಿತ್ರ 
ರಾಜ್ಯ

ಮುಟ್ಟಿನ ರಜೆ ಆದೇಶ ವಿರುದ್ಧ ಹೈಕೋರ್ಟ್​ಗೆ ಅರ್ಜಿ

ಬೆಂಗಳೂರು: ಮಹಿಳಾ ಉದ್ಯೋಗಿಗಳಿಗೆ ಪ್ರತಿ ತಿಂಗಳು ಒಂದು ದಿನ ವೇತನಸಹಿತ ಮುಟ್ಟಿನ ರಜೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿದ್ದ ಅಧಿಸೂಚನೆ ಪ್ರಶ್ನಿಸಿ ಬೆಂಗಳೂರು ಹೊಟೇಲ್​ ಮಾಲೀಕರ ಸಂಘ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದೆ.
ಯಾವುದೇ ಕಾಯ್ದೆಯ ಬಲವಿಲ್ಲದೆ ಕೇವಲ ಕಾರ್ಯಾಂಗದ ಆದೇಶದ ಮೂಲಕ ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ಅಧಿಕಾರ ಸರ್ಕಾರಕ್ಕಿಲ್ಲ. ಮುಟ್ಟಿನ ರಜೆ ನೀಡುವುದು ಉದ್ಯೋಗದಾತರ ಅಧಿಕಾರಕ್ಕೆ ಸೇರಿದ್ದು, ಅವರ ಆಂತರಿಕ ನೀತಿಗಳಿಂದ ನಿಯಂತ್ರಿಸಬೇಕು. ಕಾಯಂ, ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುವ ಮಹಿಳಾ ಸಿಬ್ಬಂದಿಗೆ ಮುಟ್ಟಿನ ರಜೆ ನೀಡಬೇಕು ಎಂದು ಸರ್ಕಾರ ಹೇಳಿದೆ. ಆದರೆ, ಅತಿಹೆಚ್ಚು ಮಹಿಳಾ ಉದ್ಯೋಗಿಗಳನ್ನು ಹೊಂದಿರುವ ಸರ್ಕಾರವೇ ಈ ರಜೆಯನ್ನು ಅವರಿಗೆ ನೀಡಿಲ್ಲ ಎಂದು ಆಕ್ಷೇಪಣೆಗಳನ್ನು ಸಲ್ಲಿಸಲಾಗಿದೆ.
ಫ್ಯಾಕ್ಟರಿಸ್​ ಕಾಯ್ದೆ, ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, ಪ್ಲಾಂಟೇಶನ್​ ಕಾರ್ಮಿಕರ ಕಾಯ್ದೆ, ಬೀಡಿ ಮತ್ತು ಸಿಗಾರ್​ ಕಾರ್ಮಿಕರ ಕಾಯ್ದೆ ಹಾಗೂ ಮೋಟಾರು ಸಾರಿಗೆ ಕಾರ್ಮಿಕರ ಕಾಯ್ದೆ ಸೇರಿ ಯಾವುದೇ ಕಾನೂನುಗಳು ಮುಟ್ಟಿನ ರಜೆಯನ್ನು ಕಡ್ಡಾಯಗೊಳಿಸುವ ನಿಬಂಧನೆಗಳನ್ನು ಹೊಂದಿಲ್ಲ. ಆದ್ದರಿಂದ, ಸರ್ಕಾರಕ್ಕೆ ಅಧಿಸೂಚನೆ ಹೊರಡಿಸುವ ಅಧಿಕಾರ ಇಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.