High court 
ರಾಜ್ಯ

ನಕಲಿ ಅಂಕಪಟ್ಟಿಯೊಂದಿಗೆ ಹೈಕೋರ್ಟ್​ಗೆ ಅರ್ಜಿ! High court

ಬೆಂಗಳೂರು: ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿ (ಎನ್​ಟಿಎ) ಪ್ರಕಟಿಸಿದ ನೀಟ್​ ಪರೀಕ್ಷೆಯ ಅಧಿಕೃತ ಅಂಕಪಟ್ಟಿಗೂ ಮತ್ತು ತಾನು ಹೊಂದಿದ್ದ ಆನ್​ಲೈನ್​ ಸ್ಕ್ರೀನ್​ಶಾಟ್​ಗೂ ವ್ಯತ್ಯಾಸವಿದೆ ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದ 18 ವರ್ಷದ ಅಭ್ಯರ್ಥಿಯ ಅರ್ಜಿ ಪುರಸ್ಕರಿಸಲು ಹೈಕೋರ್ಟ್​ ನಿರಾಕರಿಸಿದೆ. ವಿಜಯಪುರದ 18 ವರ್ಷದ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಜಯಂತ್​ ಬ್ಯಾನರ್ಜಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿತು. 


ತನ್ನಲ್ಲಿದ್ದ ಎನ್​ಟಿಎ ವೆಬ್​ಸೈಟ್​ನ ಸ್ಕ್ರೀನ್​ಶಾಟ್​ ಪ್ರಕಾರ 454 ಅಂಕಗಳು ಬಂದಿವೆ, ಆದರೆ ಅಧಿಕೃತ ಅಂಕಪಟ್ಟಿಯಲ್ಲಿ 191 ಅಂಕಗಳನ್ನು ಮಾತ್ರ ತೋರಿಸುತ್ತಿದೆ ಎಂದು ವಿದ್ಯಾರ್ಥಿನಿ ಅರ್ಜಿಯಲ್ಲಿ ವಾದಿಸಿದ್ದರು. ಎನ್​ಟಿಎ ಪರ ವಾದಿಸಿದ ವಕೀಲರು ಪ್ರತಿಕ್ರಿಯಿಸಿ, ಅರ್ಜಿದಾರರು ಸಲ್ಲಿಸಿರುವ ಸ್ಕ್ರೀನ್​ಶಾಟ್​ ಎನ್​ಟಿಎ ವೆಬ್​ಸೈಟ್ನದ್ದಲ್ಲ. ಅದು ಸಂಪೂರ್ಣವಾಗಿ ನಕಲಿ ದಾಖಲೆಯಾಗಿದೆ ಎಂದು ಸ್ಪಷ್ಟಪಡಿಸಿದರು. 
ಇದನ್ನು ಆಲಿಸಿದ ನ್ಯಾಯಪೀಠವು, ಅರ್ಜಿದಾರರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. ಅಪ್ರಾಪ್ತರ ಮೇಲಿನ ಕೋರ್ಟ್​ನ ಕಾಳಜಿಯನ್ನು ಪಾಲಕರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿತು. ನ್ಯಾಯಾಲಯವು ಮಕ್ಕಳ ಕ್ಷೇಮಾಭಿವೃದ್ಧಿ ಬಗ್ಗೆ ಕಾಳಜಿ ವಹಿಸುತ್ತದೆ ಎಂದ ಮಾತ್ರಕ್ಕೆ ಪಾಲಕರು ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು. ಮಗುವಿನ ಹೆಗಲ ಮೇಲೆ ಬಂದೂಕಿಟ್ಟು ಗುಂಡು ಹಾರಿಸಲು ಸಾಧ್ಯವೇ? ಮಗುವಿನ ಭವಿಷ್ಯದ ಜತೆ ಆಟವಾಡಬೇಡಿ ಎಂದು ತರಾಟೆಗೆ ತೆಗೆದುಕೊಂಡಿತು.

⚠️

ಸುಳ್ಳು ಸಾಕ್ಷ್ಯದ ಪ್ರಕರಣ 

ಪ್ರಕರಣವು ಮೇಲ್ನೋಟಕ್ಕೆ ಸುಳ್ಳು ಸಾಕ್ಷ್ಯದಿಂದ ಕೂಡಿದೆ. ಈ ಕುರಿತು ಮ್ಯಾಜಿಸ್ಟ್ರೆಟ್​ ತನಿಖೆಗೆ ಆದೇಶಿಸುವ ಸಂಪೂರ್ಣ ಅಧಿಕಾರ ತನಗಿದೆ. ಆದರೆ, ಮಗುವಿನ ವಿದ್ಯಾರ್ಥಿನಿಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಅಂತಹ ಕಠಿಣ ಕ್ರಮಕ್ಕೆ ಮುಂದಾಗದೆ ವಿನಾಯಿತಿ ನೀಡಲಾಗುವುದು ಎಂದು ನ್ಯಾಯಪೀಠ ಹೇಳಿತು. ಎನ್​ಟಿಎ ವಾದವನ್ನು ಆಲಿಸಿದ ಬಳಿಕ ಕೋರ್ಟ್​ ಪ್ರಕರಣದ ತೀವ್ರತೆಯನ್ನು ಪರಿಗಣಿಸಿ ಅರ್ಜಿಯನ್ನು ಹಿಂಪಡೆಯುವಂತೆ ಅರ್ಜಿದಾರರ ವಕೀಲರಿಗೆ ಸೂಚಿಸಿತು. ಅದಕ್ಕೆ ಒಪ್ಪಿದ ವಕೀಲರು ಅರ್ಜಿ ಹಿಂಪಡೆಯುವುದಾಗಿ ಮೆಮೊ ಸಲ್ಲಿಸಿದರು.