ಬೆಂಗಳೂರು: ಕಾರ್ಮಿಕರ ಕನಿಷ್ಠ ವೇತನವನ್ನು ಗಣನೀಯವಾಗಿ ಪರಿಷ್ಕರಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್ (ಕೆಇಎ) ಮತ್ತು ಎಥೀರಿಯಲ್ ಮಷೀನ್ಸ್ ಪ್ರೈ.ಲಿ. ಸಲ್ಲಿಸಿರುವ ಅರ್ಜಿಗಳನ್ನು ನ್ಯಾಯಮೂರ್ತಿ ಎಂ. ಜ್ಯೋತಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು. ಕೇಂದ್ರ ಸರ್ಕಾರವನ್ನು ಪ್ರತಿವಾದಿಯಾಗಿಸುವ ಅರ್ಜಿದಾರರ ಮನವಿಯನ್ನು ದಾಖಲಿಸಿಕೊಂಡು ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿರುವ ನ್ಯಾಯಪೀಠ ಮುಂದಿನ ವಿಚಾರಣೆಯನ್ನು ಜೂ. 9ಕ್ಕೆ ನಿಗದಿಪಡಿಸಿದೆ.
ಕಾರ್ಮಿಕ ಇಲಾಖೆಯು 2025ರ ಏ.11ರಂದು ಹೊರಡಿಸಿದ್ದ ಕರಡು ಅಧಿಸೂಚನೆಯನ್ನು ಪ್ರಶ್ನಿಸಿ ಉದ್ಯೋಗದಾತರ ಸಂಟನೆಗಳು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ಹೈಕೋರ್ಟ್, ಯಾವುದೇ ತೀರ್ಮಾನಗಳನ್ನು ನ್ಯಾಯಾಲಯದ ಅಂತಿಮ ಆದೇಶದವರೆಗೆ ಜಾರಿಗೆ ತರಬಾರದು ಎಂದು 2025ರ ಜೂನ್ ಮತ್ತು ಜುಲೈ ತಿಂಗಳಲ್ಲಿ ಮಧ್ಯಂತರ ಆದೇಶ ಹೊರಡಿಸಿದೆ. ಹೀಗಿರುವಾಗ ನ್ಯಾಯಾಲಯದ ಅನುಮತಿ ಪಡೆಯದೆ ಅಂತಿಮ ಅಧಿಸೂಚನೆ ಹೊರಡಿಸಿರುವುದು ನ್ಯಾಯಾಂಗ ನಿಂದನೆಯಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಹಳೇ ಕಾಯ್ದೆಯ ಬಳಕೆ:
1948ರ ಕನಿಷ್ಠ ವೇತನ ಕಾಯ್ದೆಯು ರದ್ದಾಗಿದ್ದು, 2025ರ ನ.21ರಿಂದ ಅನ್ವಯವಾಗುವಂತೆ 2019ರ ವೇತನ ಸಂಹಿತೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಆದರೂ ಕೂಡ ರಾಜ್ಯ ಸರ್ಕಾರವು ಹಳೆಯ ಕಾಯ್ದೆಯ ನಿಬಂಧನೆಗಳನ್ನು ಆಧರಿಸಿ 81 ಉದ್ದಿಮೆಗಳ ವೇತನ ಪರಿಷ್ಕರಣೆ ಮಾಡಿದೆ. ಇದು ಸಂವಿಧಾನಬಾಹಿರ ಎಂದು ಅರ್ಜಿದಾರರು ಹೇಳಿದ್ದಾರೆ.
ಸಾಮಾನ್ಯವಾಗಿ ಕನಿಷ್ಠ ವೇತನ ಪರಿಷ್ಕರಣೆ ಮಾಡುವಾಗ ಶೇ. 10ರಿಂದ 15ರ ಅನುಪಾತದಲ್ಲಿ ಮಾಡಲಾಗುತ್ತಿತ್ತು. ಆದರೆ, ಪ್ರಸ್ತುತ ಹೊರಡಿಸಿರುವ ಅಧಿಸೂಚನೆಯು ಅವೈಜ್ಞಾನಿಕವಾಗಿದ್ದು, ಶೇ. 60ರಷ್ಟು ಏರಿಸಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಅತ್ಯಧಿಕ ಉದ್ಯೋಗ ಸೃಷ್ಟಿಸುವ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ನಷ್ಟ ಎದುರಿಸಬೇಕಾಗುತ್ತದೆ. ರಾಷ್ಟ್ರ ರಾಜಧಾನಿ ದೆಹಲಿ ಹೊರತು ಪಡಿಸಿ ಕನಿಷ್ಠ ವೇತನವು ರಾಜ್ಯದಲ್ಲೇ ಅತ್ಯದಿಕವಾಗಿದೆ. ನೆರೆರಾಜ್ಯಗಳಲ್ಲೂ ಇಷ್ಟು ಏರಿಕೆ ಮಾಡಿಲ್ಲ. ಈ ಅಧಿಸೂಚನೆಯು ರಾಜ್ಯದಲ್ಲಿನ ಹೂಡಿಕೆ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಅರ್ಜಿದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಅರ್ಜಿದಾರರ ಪ್ರಮುಖ ವಾದಗಳೇನು?
- ಕೇಂದ್ರ ಸರ್ಕಾರವು ದೇಶದ ಕನಿಷ್ಠ ವೇತನದ ಮೂಲ ಮಿತಿಯನ್ನು ನಿಗದಿಪಡಿಸುವ ಮೊದಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿರುವುದು ತಪ್ಪು.
- ಪ್ರತಿಯೊಬ್ಬರಿಗೂ ತಮ್ಮ ಆಯ್ಕೆಯ ಉದ್ಯೋಗ ಅಥವಾ ವ್ಯವಹಾರ ಮಾಡುವ ಸ್ವಾತಂತ್ರ್ಯವನ್ನು ಸಂವಿಧಾನ ಕಲ್ಪಿಸಿದೆ. ಆದರೆ, ಸರ್ಕಾರದ ಅವೈಜ್ಞಾನಿಕ ನಿರ್ಧಾರಗಳಿಂದ ಉದ್ದಿಮೆಗಳಿಗೆ ನಷ್ಟ ಎದುರಾಗಲಿದ್ದು, ಈ ಹಕ್ಕಿನ ಉಲ್ಲಂಘನೆಯಾಗುತ್ತದೆ.
- 2025-26ರ ಅವಧಿಯ ಸಿಪಿಐ ಆಧಾರಿತ ತುಟ್ಟಿಭತ್ಯೆಯನ್ನು ಈಗಾಗಲೇ ಪಾವತಿಸಲಾಗಿದೆ. ಆದರೆ ಹೊಸ ಆದೇಶದಿಂದಾಗಿ ಭತ್ಯೆಯನ್ನು ಮರಳಿ ಪಾವತಿಸಬೇಕಾಗುತ್ತದೆ. ಇದು ಸರಿಯಲ್ಲ.4. ಆದ್ದರಿಂದ, ಮೇ 22ರಂದು ಹೊರಡಿಸಿರುವ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಮತ್ತು ಅರ್ಜಿ ಇತ್ಯರ್ಥವಾಗುವ ತನಕ ಅದರ ಅನುಷ್ಠಾನಕ್ಕೆ ಮಧ್ಯಂತರ ತಡೆ ನೀಡಬೇಕು ಎಂದು ಕೋರಲಾಗಿದೆ.