personal-freedom 
ರಾಜ್ಯ

ಸಂಪಾದಕೀಯ | ವ್ಯಕ್ತಿಸ್ವಾತಂತ್ರ್ಯ ದಮನ ಸಲ್ಲ

ರಮೇಶ್​ ಕುಮಾರ್​​ ಬಿ ಎಡಮೋಳೆ
ಆಧುನಿಕ ಮತ್ತು ಪ್ರಜಾಪ್ರಭುತ್ವವಾದಿ ಸಮಾಜದಲ್ಲಿ ವ್ಯಕ್ತಿಯೊಬ್ಬನ ಅತ್ಯಂತ ಮೂಲಭೂತ ಹಕ್ಕುಗಳಲ್ಲಿ ಜೀವನ ಸಂಗಾತಿಯ ಆಯ್ಕೆ ಕೂಡ ಒಂದು. ಆದರೆ, ಇಂದಿಗೂ ನಮ್ಮ ಸಮಾಜದಲ್ಲಿ ಜಾತಿ, ಮತ ಮತ್ತು ಕುಟುಂಬದ ಗೌರವದ ಹೆಸರಿನಲ್ಲಿ ಯುವಕ, ಯುವತಿಯರ ಈ ಹಕ್ಕನ್ನು ಬಲವಂತವಾಗಿ ದಮನ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಮರ್ಯಾದೆಗೇಡು ಹತ್ಯೆ ತಡೆ ಕಾಯ್ದೆ ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಯ ನಿಟ್ಟಿನಲ್ಲಿ ಒಂದು ಕ್ರಾಂತಿಕಾರಿ ಮತ್ತು ಸ್ವಾಗತಾರ್ಹ ಹೆಜ್ಜೆಯಾಗಿದೆ.
ಸಂವಿಧಾನದ 21ನೇ ವಿಧಿಯು ಪ್ರತಿಯೊಬ್ಬ ನಾಗರಿಕನಿಗೂ ಜೀವಿಸುವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಸುಪ್ರೀಂ ಕೋರ್ಟ್ ಕೂಡ ತನ್ನ ಹಲವು ತೀರ್ಪಗಳಲ್ಲಿ ಇಬ್ಬರು ವಯಸ್ಕರು ಪರಸ್ಪರ ಒಪ್ಪಿಗೆಯಿಂದ ವಿವಾಹವಾಗುವುದು ಅವರ ಮೂಲಭೂತ ಹಕ್ಕು ಎಂದು ಸ್ಪಷ್ಟವಾಗಿ ಪ್ರತಿಪಾದಿಸಿದೆ. ಪ್ರೀತಿ ಮತ್ತು ವಿವಾಹದಂತಹ ವೈಯಕ್ತಿಕ ವಿಚಾರಗಳಲ್ಲಿ ಕುಟುಂಬ ಅಥವಾ ಸಮಾಜ ಹಸ್ತಕ್ಷೇಪ ಮಾಡುವುದು ಕಾನೂನುಬಾಹಿರ ಮಾತ್ರವಲ್ಲ, ಅದು ಮಾನವ ಹಕ್ಕುಗಳ ಉಲ್ಲಂಘನೆಯೂ ಹೌದು. ಮರ್ಯಾದೆಯ ಹೆಸರಿನಲ್ಲಿ ನಡೆಯುವ ಕೊಲೆಗಳು ಕೇವಲ ಅಪರಾಧಗಳಲ್ಲ, ಅವು ಸಮಾಜದ ಕ್ರೌರ್ಯದ ಪರಮಾವಧಿ.
ಪ್ರಸ್ತಾವಿತ ಕಾಯ್ದೆ ಕೇವಲ ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದಕ್ಕೆ ಮಾತ್ರ ಸೀಮಿತವಾಗಬಾರದು. ಇದು ಅಂತರ್ಜಾತಿ ವಿವಾಹವಾಗುವ ದಂಪತಿಗಳಿಗೆ ಅಗತ್ಯವಿರುವ ಸುರಕ್ಷಿತ ಆಶ್ರಯ ತಾಣಗಳನ್ನು ಕಲ್ಪಿಸುವುದು ಮತ್ತು ಅವರಿಗೆ ಪೊಲೀಸ್ ರಕ್ಷಣೆ ನೀಡುವುದನ್ನು ಖಾತ್ರಿಪಡಿಸಬೇಕು. ಅನೇಕ ಪ್ರಕರಣಗಳಲ್ಲಿ, ಪಾಲಕರು ಅಥವಾ ಸಮುದಾಯದ ಮುಖಂಡರು ಖಾಪ್ ಪಂಚಾಯತ್ ಮಾದರಿಯ ಅನಧಿಕೃತ ಅಧಿಕಾರಕೂಟಗಳನ್ನು ನಡೆಸುತ್ತಾರೆ. ಯುವಕ, ಯುವತಿಯರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ.
ಇಂತಹ ಪ್ರವೃತ್ತಿಗಳಿಗೆ ಲಗಾಮು ಹಾಕಲು ಬಲಿಷ್ಠವಾದ ಶಾಸನಬದ್ಧ ಚೌಕಟ್ಟು ಅತ್ಯಗತ್ಯವಾಗಿತ್ತು. ಅದೀಗ ಕಾರ್ಯರೂಪಕ್ಕೆ ಬರುವ ಕಾಲ ಸನ್ನಿಹಿತವಾಗಿದೆ. ಕೇವಲ ಕಾನೂನು ರೂಪಿಸುವುದರಿಂದಲೇ ರಾತ್ರೋರಾತ್ರಿ ಬದಲಾವಣೆ ಸಾಧ್ಯವಿಲ್ಲ. ಸಮಾಜದ ಆಳದಲ್ಲಿ ಬೇರೂರಿರುವ ಜಾತೀಯತೆ ಮತ್ತು ಕುಟುಂಬದ ಗೌರವದ ಭ್ರಮೆಯನ್ನು ಹೋಗಲಾಡಿಸುವುದು ಅತಿ ದೊಡ್ಡ ಸವಾಲಾಗಿದೆ. ಶಿಕ್ಷಣ ಸಂಸ್ಥೆಗಳ ಮೂಲಕ ಮತ್ತು ಸಾಮಾಜಿಕ ಅಭಿಯಾನಗಳ ಮೂಲಕ ಸಾಂವಿಧಾನಿಕ ಮೌಲ್ಯಗಳ ಬಗ್ಗೆ ಮತ್ತು ತಾರತಮ್ಯದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಬೇಕು. ಕಾನೂನು ಒಂದು ಕಡೆಯಾದರೆ, ಸಮಾಜದ ಮನಸ್ಥಿತಿ ಬದಲಿಸುವ ಪ್ರಕ್ರಿಯೆ ಮತ್ತೊಂದು ಕಡೆ ನಿರಂತರವಾಗಿ ನಡೆಯಬೇಕು.
ಮರ್ಯಾದೆಗೇಡು ಹತ್ಯೆಗಳನ್ನು ತಡೆಯುವ ಕಾಯ್ದೆ ರಾಜ್ಯದ ಯುವಕ-ಯುವತಿಯರಿಗೆ ತಮ್ಮ ಬದುಕಿನ ನಿರ್ಧಾರಗಳನ್ನು ಸ್ವತಂತ್ರವಾಗಿ ತೆಗೆದುಕೊಳ್ಳುವ ನಿಟ್ಟಿನಲ್ಲಿ ಆತ್ಮವಿಶ್ವಾಸವನ್ನು ತುಂಬಲಿದೆ. ಸರ್ಕಾರ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಈ ಕಾಯ್ದೆಯನ್ನು ಜಾರಿಗೆ ತರುವ ಮೂಲಕ ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಗೆ ಬದ್ಧತೆ ತೋರಬೇಕಿದೆ. ನಾಗರಿಕ ಸಮಾಜವೂ ಪ್ರೀತಿ ಮತ್ತು ಮಾನವೀಯತೆಯನ್ನು ಜಾತಿಗಿಂತ ಮಿಗಿಲಾಗಿ ಕಾಣುವ ಗುಣವನ್ನು ಬೆಳೆಸಿಕೊಳ್ಳಬೇಕಿದೆ. ಇದೇ ವೇಳೆ, ಈ ರೀತಿಯ ವಿವಾಹಗಳು ಯುವತಿಯರನ್ನು ದುರ್ಬಳಕೆ ಮಾಡಿಕೊಳ್ಳುವುದಕ್ಕೆ, ನಂತರದ ವರ್ಷಗಳಲ್ಲಿ ದೌರ್ಜನ್ಯ ಮಾಡುವುದಕ್ಕೆ ದಾರಿ ಮಾಡಿಕೊಡದಂತೆಯೂ ಎಚ್ಚರ ವಹಿಸುವುದು ಸರ್ಕಾರದ ಕರ್ತವ್ಯವಾಗಿದೆ.