ಬೆಂಗಳೂರು: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಓ) ಎರಡನೇ ಹಂತದ ಟೌನ್ಶಿಪ್ ಆವರಣದಿಂದ 21 ಬೀದಿ ನಾಯಿಗಳು ನಾಪತ್ತೆಯಾಗಿರುವ ಪ್ರಕರಣಕ್ಕೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ತೆರವುಗೊಳಿಸಿರುವ ಹೈಕೋರ್ಟ್, ಆರು ವಾರಗಳೊಳಗೆ ತನಿಖಾ ವರದಿ ಸಲ್ಲಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಿದೆ.
ಮಹದೇವಪುರ ಠಾಣೆಯಲ್ಲಿ ದಾಖಲಾಗಿರುವ ಎ್ಐಆರ್ ರದ್ದುಗೊಳಿಸಲು ಕೋರಿ ಡಿಆರ್ಡಿಒ ಅಧಿಕಾರಿಗಳಾದ ರಾಕೇಶ್ ಕುಮಾರ್ ಸಾಹು ಮತ್ತು ಟಿ.ಜಿ. ಸುಧಾಕರ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ. ಆದರೆ, ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚಿಸಿದೆ.
ಡಿಆರ್ಡಿಒ ಪರ ವಕೀಲರು ವಾದ ಮಂಡಿಸಿ, ಯಾರೋ ಅಪರಿಚಿತರು ಆವರಣದೊಳಗೆ ನುಗ್ಗಿ ನಾಯಿಗಳನ್ನು ಕೊಂಡೊಯ್ದಿದ್ದಾರೆ. ಇದಕ್ಕೆ ಈ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಯಾರು ಒಳಗೆ ಬಂದಿದ್ದರು ಎಂಬುದನ್ನು ಪತ್ತೆಹಚ್ಚಲು ತನಿಖೆಯ ಅಗತ್ಯವಿದೆ ಎಂದು ತಿಳಿಸಿದ್ದಾರೆ. ದೂರುದಾರರ ಪರ ವಕೀಲರು ವಾದ ಮಂಡಿಸಿ, ಡಿಆರ್ಡಿಒ ಅನುಮತಿ ಇಲ್ಲದೆ, ಯಾರಿಗೂ ಸಂಸ್ಥೆಯ ಆವರಣದೊಳಗೆ ಬರಲು ಸಾಧ್ಯವಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ.
ಪ್ರಕರಣದ ಹಿನ್ನೆಲೆ:
ಮಾರ್ಚ್ 9ರಂದು ಡಿಆರ್ಡಿಒ ಆವರಣದ ಒಳಗಿನ ರಸ್ತೆಗಳಲ್ಲಿದ್ದ ಒಟ್ಟು 21 ಬೀದಿನಾಯಿಗಳನ್ನು ಅಕ್ರಮವಾಗಿ ಕೊಂಡೊಯ್ಯಲಾಗಿದ್ದು, ಅವುಗಳ ಪತ್ತೆ ಇದುವರೆಗೂ ಆಗಿಲ್ಲ ಎಂದು ಆರೋಪಿಸಲಾಗಿದೆ. ನಾಯಿಗಳನ್ನು ಗೋಣಿಚೀಲದೊಳಗೆ ತುಂಬುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಂತರ ಪ್ರಾಣಿಪ್ರಿಯರು ಪ್ರತಿಭಟನೆ ನಡೆಸಿದ್ದರು. ಈ ಬಗ್ಗೆ ಬೆಂಗಳೂರು ಪೂರ್ವ ವಲಯ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕರು ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.