ಬೆಂಗಳೂರು: ಸೇವೆಯಿಂದ ನಿವೃತ್ತಿ ಹೊಂದಿದ್ದಾರೆ ಎಂಬ ಕಾರಣಕ್ಕೆ ನೌಕರರ ಕಾಯಂ ಸ್ಥಾನಮಾನದ ಹಕ್ಕುಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಈ ಮೂಲಕ ಉತ್ತರ ಕನ್ನಡದ ಶಿರಸಿ ತಾಲೂಕಿನ ಕುಳವೆ ಗ್ರಾ.ಪಂ.ನಲ್ಲಿ 21 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ರಮೇಶ್ ವೆಂಕಟರಮಣ ಹೆಗಡೆ ಅವರಿಗೆ ಕಾಯಂ ಸ್ಥಾನಮಾನ ಆಧಾರಿತ ಸೌಲಭ್ಯಗಳನ್ನು ನೀಡುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ರಮೇಶ್ ವೆಂಕಟರಮಣ ಹೆಗಡೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸ್ನನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ತಾತ್ಕಾಲಿಕ, ದಿನಗೂಲಿ ಅಥವಾ ಯಾವುದೇ ರೀತಿಯ ನೇಮಕಾತಿಗೆ ಒಳಪಟ್ಟ ನೌಕರರು 10 ವರ್ಷಗಳ ಸೇವೆ ಪೂರ್ಣಗೊಳಿಸಿದ ನಂತರ ಅಥವಾ ಹುದ್ದೆಗೆ ಅರ್ಹತೆ ಪಡೆದ ನಂತರ ಸೇವಾ ಕ್ರಮಬದ್ಧತೆಗೆ ಅರ್ಹರಾಗಿರುತ್ತಾರೆ. ಅವರಿಗೆ ಆ ಸೌಲಭ್ಯಗಳನ್ನು ನಿರಾಕರಿಸಿದರೆ ಅದು ಶೋಷಣೆಯಾಗುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಅರ್ಜಿದಾರರು 21 ವರ್ಷಗಳ ಕಾಲ ಅಟೆಂಡರ್ ಮತ್ತು ಬಿಲ್ ಕಲೆಕ್ಟರ್ ಆಗಿ 1994ರಿಂದ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸಿದ್ದಾರೆ. ಅವರು ಈಗ ನಿವೃತ್ತರಾಗಿದ್ದರೂ ಅವರ ಸೇವೆಯನ್ನು ಕಾಯಂ ವ್ಯಾಪ್ತಿಯಲ್ಲಿಯೇ ಪರಿಗಣಿಸಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪುಗಳನ್ನು ಪ್ರಸ್ತುತ ಪ್ರಕರಣದಲ್ಲಿ ರ್ನಿಲಸಲು ಸಾಧ್ಯವಿಲ್ಲ. ನ್ಯಾಯಾಲಯದ ನಿರ್ದೇಶನಗಳನ್ನು ಕಡೆಗಣಿಸಿ ಅರ್ಜಿದಾರರನ್ನು ಸರ್ಕಾರ ಮತ್ತೊಮ್ಮೆ ಪ್ರಕರಣಗಳ ಸುಳಿಗೆ ತಳ್ಳಬಾರದು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
2014ರಲ್ಲೇ ಆದೇಶ:
ರಮೇಶ್ ವೆಂಕಟರಮಣ ಹೆಗಡೆ ಅವರ ಸೇವೆಯನ್ನು ಕಾಯಂಗೊಳಿಸುವಂತೆ ಹೈಕೋರ್ಟ್ 2014ರಲ್ಲೇ ಆದೇಶ ನೀಡಿತ್ತು. ಆದರೆ, ಸರ್ಕಾರ ಕ್ರಮ ಕೈಗೊಂಡಿರಲಿಲ್ಲ. ಇದನ್ನು ಅವರು ಮತ್ತೆ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಪೀಠ, 2004ರಿಂದ ಅನ್ವಯವಾಗುವಂತೆ ಕಾಯಂ ಸ್ಥಾನಮಾನದ ಸೌಲಭ್ಯಗಳನ್ನು ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದೆ.