ರಬಕವಿ/ ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶರತ್ಚಂದ್ರ ಜಂಬಗಿ ಅವರ ಸೇವಾ ನಿವೃತ್ತಿ, ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮಕ್ಕೆ ಶಾಸಕ ಸಿದ್ದು ಸವದಿ ಚಾಲನೆ ನೀಡಿದರು. ಬಸವರಾಜ ಗಣಿ, ಗಂಗಪ್ಪ ಅಮ್ಮಲಜೇರಿ, ಗುರು ಮರಡಿಮಠ ಇತರರಿದ್ದರು.
- ಶಾಸಕ ಸಿದ್ದು ಸವದಿ ಹೇಳಿಕೆ
- ಸೇವಾ ನಿವೃತ್ತಿ, ವಿದ್ಯಾರ್ಥಿಗಳ ಸ್ವಾಗತ ಕಾರ್ಯಕ್ರಮ
ರಬಕವಿ/ಬನಹಟ್ಟಿ: ಶಿಕ್ಷಕ ವೃತ್ತಿಗೆ ನಿವೃತ್ತಿ ಇರಬಹುದು. ಆದರೆ ಶಿಕ್ಷಣ ಸೇವೆಗೆ ಎಂದಿಗೂ ನಿವೃತ್ತಿಯಿಲ್ಲ ಎಂದು ಶಾಸಕ ಸಿದ್ದು ಸವದಿ ಹೇಳಿದರು.
ತಾಲೂಕಿನ ನಾವಲಗಿ ಗ್ರಾಮದ ನೀಲಕಂಠೇಶ್ವರ ಸಮುದಾಯ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಶರತ್ಚಂದ್ರ ಜಂಬಗಿ ಅವರ ಸೇವಾ ನಿವೃತ್ತಿ, ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಿಕ್ಷಕರು ಸಮಾಜಕ್ಕೆ ನೀಡುವ ಜ್ಞಾನ, ಸಂಸ್ಕಾರ ಹಾಗೂ ಮೌಲ್ಯಗಳು ಸದಾಕಾಲ ಜೀವಂತವಾಗಿರುತ್ತವೆ. ವಿದ್ಯಾರ್ಥಿಗಳು ಜೀವನದ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಗೆ ಬರಬೇಕು. ಶಿಕ್ಷಣವನ್ನು ಮನಸ್ಸಿಟ್ಟು ಕಲಿಯಬೇಕು. ತಿಳಿಯದ ವಿಷಯಗಳನ್ನು ಹಂತ ಹಂತವಾಗಿ ಅರಿತುಕೊಳ್ಳಬೇಕು. ಜಗತ್ತಿನಲ್ಲಿ ಶಾಶ್ವತ ಮಾನ್ಯತೆ ಮತ್ತು ಗೌರವ ತಂದುಕೊಡುವುದು ಶಿಕ್ಷಣ ಮಾತ್ರ. ಶಿಕ್ಷಣವನ್ನು ಯಾರೂ ಕದಿಯಲಾಗದ ಅಮೂಲ್ಯ ಸಂಪತ್ತು ಎಂದು ಅವರು ಹೇಳಿದರು.
ಸೇವಾ ನಿವೃತ್ತಿ ಹೊಂದಿದ ಪ್ರಾಚಾರ್ಯ ಶರತ್ಚಂದ್ರ ಜಂಬಗಿ ಮಾತನಾಡಿ, ತಮ್ಮ ಹಲವು ವರ್ಷಗಳ ಶಿಕ್ಷಣ ಸೇವೆಯ ಅನುಭವಗಳನ್ನು ಹಂಚಿಕೊಂಡರು. ಶಿಕ್ಷಕ ವೃತ್ತಿ ಕೇವಲ ಉದ್ಯೋಗವಲ್ಲ ಅದು ಸಮಾಜ ನಿರ್ಮಾಣದ ಪವಿತ್ರ ಕಾಯಕ. ವಿದ್ಯಾರ್ಥಿಗಳ ಸಾಧನೆಯೇ ಶಿಕ್ಷಕರಿಗೆ ದೊರೆಯುವ ಅತ್ಯಂತ ದೊಡ್ಡ ಗೌರವವಾಗಿದೆ ಎಂದರು.
ಎಸ್‌ಡಿಎಂಸಿ ಉಪಾಧ್ಯಕ್ಷ ಬಸವರಾಜ ಗಣಿ, ಗಂಗಪ್ಪ ಅಮ್ಮಲಜೇರಿ, ಗುರು ಮರಡಿಮಠ, ದಾನಪ್ಪ ಆಸಂಗಿ, ಆನಂದ ಕಂಪು, ಅಲ್ಲಪ್ಪ ಮುಗಳಖೋಡ, ಈರಪ್ಪ ಕಡಕಬಾವಿ, ಸಿದ್ದು ಕಂಚು, ಮಹಾದೇವ ಸಿದ್ದಾಪುರ, ಪ್ರಭಾರಿ ಪ್ರಾಚಾರ್ಯ ಎಂ.ಸಿ. ನರೇಗಲ್ಲ, ಐ.ಪಿ. ಬಾವಲತ್ತಿ, ಮಧುಕೇಶ್ವರ ಬೆಳಗಲಿ, ಅಕ್ಕುತಾಯಿ ಚನಾಳ, ರೇಖಾ ಕದಂ ಇತರರಿದ್ದರು. ಗೋಪಾಲ ಮಾಳಗೆ ಸ್ವಾಗತಿಸಿದರು. ಬಿ.ಬಿ. ಕುಂಬಾರ ನಿರೂಪಿಸಿ ವಂದಿಸಿದರು.