ಆಲೂರಿನ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
- ಈದ್ಗಾ ಮೈದಾನ
- ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ
ಆಲೂರು: ಪಟ್ಟಣದ ಈದ್ಗಾ ಮೈದಾನದಲ್ಲಿ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ತ್ಯಾಗ ಮತ್ತು ಬಲಿದಾನದ ಸಂಕೇತವಾಗಿರುವ ಬಕ್ರೀದ್ ಹಬ್ಬವನ್ನು ಸಡಗರದಿಂದ ಆಚರಿಸಿದರು.
ಪಟ್ಟಣದ ಜಾಮಿಯಾ ಮಸೀದಿ ಧರ್ಮ ಗುರುಗಳಾದ ಮೌಲನಾ ರಿಯಾಜ್ ಮಾತನಾಡಿ, ಬಕ್ರೀದ್ ಹಬ್ಬ ಮತ್ತು ಆಚರಣೆಗೆ ಐತಿಹಾಸಿಕ ಹಿನ್ನೆಲೆ ಇದೆ. ಹಬ್ಬದ ದಿನದಂದು ಮುಸ್ಲಿಮರು ಹೊಸ ಬಟ್ಟೆ ಧರಿಸಿ, ಮುಂಜಾನೆಯೇ ಮಸೀದಿ ಅಥವಾ ಈದ್ಗಾ ಮೈದಾನಗಳಿಗೆ ತೆರಳಿ ವಿಶೇಷ ಜಂಟಿ ಪ್ರಾರ್ಥನೆ ಸಲ್ಲಿಸುತ್ತಾರೆ. ಪ್ರಾರ್ಥನೆ ನಂತರ ಅಲ್ಲಾಹನ ಹೆಸರಿನಲ್ಲಿ ಕುರಿ, ಮೇಕೆ ಅಥವಾ ಒಂಟೆಯನ್ನು ಬಲಿ ನೀಡಲಾಗುತ್ತದೆ. ಬಲಿ ನೀಡಿದ ಪ್ರಾಣಿಯ ಮಾಂಸವನ್ನು ಕಡ್ಡಾಯವಾಗಿ ಮೂರು ಸಮಾನ ಭಾಗಗಳಾಗಿ ಹಂಚಲಾಗುತ್ತದೆ ಎಂದರು.
ಹಬ್ಬದ ಸಮಯದಲ್ಲಿ ಜಗತ್ತಿನಾದ್ಯಂತ ಲಕ್ಷಾಂತರ ಮುಸ್ಲಿಮರು ಸೌದಿ ಅರೇಬಿಯಾದ ಪವಿತ್ರ ನಗರಿ ಮೆಕ್ಕಾಗೆ ತೆರಳುತ್ತಾರೆ. ಇಸ್ಲಾಂ ಧರ್ಮದ 5 ಮುಖ್ಯ ತೂಗುಗಂಬಗಳಲ್ಲಿ ಹಜ್ ಯಾತ್ರೆ ಕೂಡ ಒಂದಾಗಿದೆ. ಯಾರೆಲ್ಲ ಆರ್ಥಿಕ ಮತ್ತು ದೈಹಿಕವಾಗಿ ಶಕ್ತರಾಗಿರುತ್ತಾರೋ, ಅವರು ಜೀವನದಲ್ಲಿ ಒಮ್ಮೆಯಾದರೂ ಹಜ್‌ಯಾತ್ರೆ ಮಾಡಬೇಕೆಂಬ ನಿಯಮವಿದೆ ಎಂದರು.
ಬಕ್ರೀದ್ ಪ್ರಾಣಿ ಬಲಿ ಕೊಡುವ ಹಬ್ಬವಲ್ಲ. ಬದಲಾಗಿ ಅದು ನಮ್ಮಲ್ಲಿರುವ ಅಹಂಕಾರ, ಸ್ವಾರ್ಥ ಮತ್ತು ಕೆಟ್ಟ ಆಲೋಚನೆಗಳನ್ನು ತ್ಯಜಿಸಿ, ದೇವರಿಗೆ ಸಂಪೂರ್ಣವಾಗಿ ಶರಣಾಗುವುದನ್ನು ಕಲಿಸುತ್ತದೆ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು ಮತ್ತು ಸಹೋದರತ್ವವನ್ನು ಬೆಳೆಸಿಕೊಳ್ಳುವುದು ಈ ಹಬ್ಬದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.
ಜಾಮೀಯ ಮಸೀದಿ ಅಧ್ಯಕ್ಷ ಇರ್ಫಾನ್ ಅಲ್ಲಾ ಷರೀಫ್, ಕಾರ್ಯದರ್ಶಿ ಫರೀದ್ ಅಹಮದ್, ಜಿಲ್ಲಾ ಬೋರ್ಡ್ ಮಾಜಿ ಅಧ್ಯಕ್ಷ ಕಬೀರ್ ಅಹ್ಮದ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆದಿಲ್ ಪಾಷ, ಪಪಂ ಮಾಜಿ ಉಪಾಧ್ಯಕ್ಷ ತೋಫಿಕ್ ಅಹಮದ್, ಖಾಲಿದ್ ಪಾಷಾ, ಸರ್ದಾರ್ ಪಾಷ, ಅನ್ವರ್ ಪಾಷಾ, ಅಸ್ಲಾಂ ಪಾಷಾ ಇತರರಿದ್ದರು.