ಬಿಕೆಎಸ್ ರಾಷ್ಟ್ರೀಯ ಅಧ್ಯಕ್ಷ ಸಾಯಿರೆಡ್ಡಿ
ಬೆಂಗಳೂರು: ಭಾರತೀಯ ಕೃಷಿ ಆರ್ಥಿಕ ಸಂಶೋಧನಾ ಕೇಂದ್ರ (ಬಿಎಇಆರ್‌ಸಿ) ಹಾಗೂ ಸಮನ್ವಯ ಟ್ರಸ್ಟ್ ಆಶ್ರಯದಲ್ಲಿ ಭಾರತೀಯ ಕಿಸಾನ್ ಸಂಘ (ಬಿಕೆಎಸ್), ಗಾಂಧಿಭವನದಲ್ಲಿ ‘ಕೃಷಿ ಭೂಮಿಯ ಸ್ವಾಧೀನ ರೈತರ ಅಸ್ತಿತ್ವಕ್ಕೆ ಪೂರಕವೇ..? ಮಾರಕವೇ...?’ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಭೂಸ್ವಾಧೀನ ಕಾಯ್ದೆ ಬಗ್ಗೆ ಹಲವು ತಜ್ಞರು ವಿಚಾರ ಮಂಡಿಸಿದರು.
ಬಿಕೆಎಸ್ ರಾಷ್ಟ್ರೀಯ ಅಧ್ಯಕ್ಷ ಸಾಯಿರೆಡ್ಡಿ ಮಾತನಾಡಿ, ಭೂಸ್ವಾಧೀನಕ್ಕೂ ಮುನ್ನ ಸಾರ್ವಜನಿಕರ ಅಭಿಪ್ರಾಯ, ಗ್ರಾಮಸಭೆ ಹಾಗೂ ಸಮ್ಮತಿ ಪ್ರಕ್ರಿಯೆ ಪಡೆಯುವುದು ಮುಖ್ಯ. ಭೂಮಿ ಕಳೆದುಕೊಂಡ ರೈತರು, ಕಾರ್ಮಿಕರು ಸೇರಿ ಇತರೆ ಬಾಧಿತ ಕುಟುಂಬಗಳ ಪುನರ್ವಸತಿ ಮತ್ತು ಪುನರ್ ನಿರ್ಮಾಣದ ಹಕ್ಕುಗಳನ್ನು ಮಂಡಿಸಬಹುದು ಎಂದರು.
ಬಿಎಇಆರ್‌ಸಿ ಅಧ್ಯಕ್ಷ ಪ್ರಮೋದ್ ಚೌಧರಿ ಮಾತನಾಡಿ, ಕೃಷಿ ಭೂಮಿ ಸ್ವಾಧೀನದ ಹೆಸರಿನಲ್ಲಿ ಸಾವಿರಾರು ರೈತರು, ಕೃಷಿ ಕಾರ್ಮಿಕರು, ಗ್ರಾಮೀಣ ಕುಟುಂಬಗಳು ತಮ್ಮ ಜೀವನೋಪಾಯ, ಜೀವನಾಧಾರ ಮತ್ತು ಸಾಮಾಜಿಕ ಭದ್ರತೆ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಭೂಸ್ವಾಧೀನ ಕಾನೂನುಗಳ ಕುರಿತು ಸಮಗ್ರ ಅರಿವು ಮೂಡಿಸಲು ಕೆಲಸ ಮಾಡುತ್ತಿದ್ದೇವೆ. ರೈತರು ಮತ್ತು ಭೂಸ್ವಾಧೀನದಿಂದ ಬಾಧಿತರಾದ ಕುಟುಂಬಗಳಿಗೆ ದೊರೆಯುವ ಹಕ್ಕುಗಳ ಕುರಿತು ಸಮಗ್ರ ಚರ್ಚೆ ನಡೆಸಿದ್ದೇವೆ ಎಂದರು.
ಸರ್ಕಾರ, ಭೂಸ್ವಾಧೀನ ಪ್ರಾಧಿಕಾರಗಳ ಕಾನೂನುಬದ್ಧ ಜವಾಬ್ದಾರಿ, ಭೂಸ್ವಾಧೀನ ಪ್ರಕ್ರಿಯೆಯಲ್ಲಿ ರೈತರು ಗಮನಿಸಬೇಕಾದ ಕಾನೂನು ಅಂಶಗಳು ಮತ್ತು ನ್ಯಾಯಾಲಯಗಳ ಮಹತ್ವದ ತೀರ್ಪುಗಳ ಕುರಿತು ವಕೀಲ ವಿಷ್ಣು ಹೆಗಡೆ ವಿಚಾರ ಮಂಡಿಸಿದರು. ಭೀಮಸೇನ ಕೋಕರೆ, ಪುಟ್ಟಸ್ವಾಮಿ ಗೌಡ, ಪ್ರಾಂತ ಅಧ್ಯಕ್ಷ ಹಾಡ್ಯ ರಮೇಶ್ ರಾಜು ಮತ್ತಿತರರಿದ್ದರು.