ಬೇಲೂರಿನಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಹಾಗೂ ನಾಟಿ ವೈದ್ಯಕೀಯ ಶಿಬಿರವನ್ನು ಗಣ್ಯರು ಉದ್ಘಾಟಿಸಿದರು. 
ರಾಜ್ಯ

ಆಯುರ್ವೇದ, ಪಾರಂಪರಿಕ ಚಿಕಿತ್ಸಾ ಪದ್ಧತಿಯತ್ತ ಜನರ ಒಲವು

ಪ್ರಮುಖ ಮುಖ್ಯಾಂಶಗಳು

  • ಬಿ.ಸಿ.ಮಂಜುನಾಥ್ ಸೇವಾ ಪ್ರತಿಷ್ಠಾನ
  • ಬಿ.ಸಿ.ಮಂಜುನಾಥ್ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಸಂತೋಷ್
ಬೇಲೂರು: ಆಧುನಿಕ ಜೀವನ ಶೈಲಿ ಹಾಗೂ ಆಹಾರ ಪದ್ಧತಿ ಬದಲಾವಣೆಯಿಂದ ಹೊಸ ಹೊಸ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿದ್ದು, ಇಂತಹ ಸಂದರ್ಭದಲ್ಲಿ ಆಯುರ್ವೇದ ಮತ್ತು ಪಾರಂಪರಿಕ ಚಿಕಿತ್ಸಾ ಪದ್ಧತಿ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚುತ್ತಿದೆ ಎಂದು ಬಿ.ಸಿ.ಮಂಜುನಾಥ್ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಿ.ಎಂ.ಸಂತೋಷ್ ಹೇಳಿದರು.
ಬಿ.ಸಿ.ಮಂಜುನಾಥ್ ಸೇವಾ ಪ್ರತಿಷ್ಠಾನದಿಂದ ಪಟ್ಟಣದ ಹೇಮಾವತಿ ಮಂಜುನಾಥ್ ಕಲ್ಯಾಣ ಮಂಟಪದಲ್ಲಿ ಬುಧವಾರ ಹರಪನಹಳ್ಳಿಯ ಪಾರಂಪರಿಕ ನಾಟಿ ವೈದ್ಯ ರಾಜಪ್ಪ ಅವರ ನೇತೃತ್ವದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣೆ ಹಾಗೂ ನಾಟಿ ವೈದ್ಯಕೀಯ ಶಿಬಿರದಲ್ಲಿ ಮಾತನಾಡಿದರು.
ಔಷಧ ಆಹಾರವಾಗಬಾರದು. ಬದಲಾಗಿ ಆಹಾರವೇ ಔಷಧ ಆಗಬೇಕು ಎಂಬ ಪೂರ್ವಿಕರ ಸಂದೇಶವನ್ನು ಪಾಲಿಸುವುದು ಅಗತ್ಯ. ಹರಪನಹಳ್ಳಿಯ ನಾಟಿ ವೈದ್ಯ ರಾಜಪ್ಪ ಅವರು ರಾಜ್ಯಾದ್ಯಂತ ಸೇವೆ ಸಲ್ಲಿಸುತ್ತಿದ್ದು, ಕಡಿಮೆ ವೆಚ್ಚದಲ್ಲಿ ಔಷಧ ನೀಡಿ ಜನರ ಆರೋಗ್ಯ ಕಾಪಾಡುವ ಕಾರ್ಯ ಮಾಡುತ್ತಿದ್ದಾರೆ. ಪ್ರತಿ ತಿಂಗಳ ಮೊದಲನೇ ತಾರೀಖು ಬೇಲೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಪುರಸಭೆ ಸದಸ್ಯ ಬಿ.ಗಿರೀಶ್ ಮಾತನಾಡಿ, ಪಾರಂಪರಿಕ ನಾಟಿ ವೈದ್ಯಕೀಯ ನಮ್ಮ ಸಂಸ್ಕೃತಿ ಮತ್ತು ಪ್ರಕೃತಿ ಜ್ಞಾನದ ಅಮೂಲ್ಯ ಪರಂಪರೆಯಾಗಿದೆ. ಇದರಲ್ಲಿರುವ ಉತ್ತಮ ಅಂಶಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ, ಅಗತ್ಯವಿದ್ದಲ್ಲಿ ಅರ್ಹ ವೈದ್ಯರ ಸಲಹೆಯೊಂದಿಗೆ ಪೂರಕ ಚಿಕಿತ್ಸೆಯಾಗಿ ಬಳಸುವುದು ಸೂಕ್ತ ಎಂದರು.
ಶಿಬಿರದಲ್ಲಿ ನೂರಾರು ಜನರು ಭಾಗವಹಿಸಿ ತಮ್ಮ ಆರೋಗ್ಯ ಸಮಸ್ಯೆಗಳ ಕುರಿತು ಸಲಹೆ ಪಡೆದು ಔಷಧ ಸ್ವೀಕರಿಸಿದರು. ಪುರಸಭೆ ಸದಸ್ಯ ಭರತ್ ಕುಮಾರ್, ಡಾ.ರಾಜಕುಮಾರ ಅಭಿಮಾನಿ ಸಂಘದ ಅಧ್ಯಕ್ಷ ತೀರ್ಥಂಕರ, ಜಿಲ್ಲಾ ಕೆಡಿಪಿ ಸದಸ್ಯೆ ಸೌಮ್ಯಾ ಆನಂದ್, ನಾಟಿ ವೈದ್ಯ ರಾಜಪ್ಪ ಇತರರಿದ್ದರು.
ನಾಲ್ಕು ದಶಕಗಳಿಂದ ವಂಶಪಾರಂಪರ್ಯವಾಗಿ ಬಂದಿರುವ ನಾಟಿ ವೈದ್ಯಕೀಯ ಜ್ಞಾನವನ್ನು ಕಳೆದ ನಾಲ್ಕು ದಶಕಗಳಿಂದ ಜನಸೇವೆಗೆ ಬಳಸುತ್ತಿದ್ದೇವೆ. ಬೆನ್ನು ನೋವು, ಕತ್ತುನೋವು, ಸೊಂಟ ನೋವು, ಮಧುಮೇಹ, ಮೂಲವ್ಯಾಧಿ, ಗ್ಯಾಸ್ಟಿಕ್, ದಮ್ಮು, ಕೆಮ್ಮು ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳಿಗೆ ಪಾರಂಪರಿಕ ಔಷಧ ನೀಡಲಾಗುತ್ತಿದೆ.
ರಾಜಪ್ಪ ಹರಪನಹಳ್ಳಿಯ ನಾಟಿ ವೈದ್ಯ