ಹಿಪ್ಪರಗಿ ಬ್ಯಾರೇಜ್‌ನಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದ್ದು, ಸೋಮವಾರ ಬ್ಯಾರೇಜ್‌ಗೆ ಸುಮಾರು 80 ಸಾವಿರ ಕ್ಯುಸೆಕ್ ಒಳಹರಿವಿನೊಂದಿಗೆ ನೀರು ಶಾಂತವಾಗಿ ಹರಿಯುತ್ತಿರುವುದು. 
ರಾಜ್ಯ

ಕೃಷ್ಣಾ ನದಿ ಪ್ರವಾಹ ಭೀತಿಯಿಂದ ಜನರು ನಿರಾಳ

ಪ್ರಮುಖ ಮುಖ್ಯಾಂಶಗಳು

  • ಹಿಪ್ಪರಗಿ ಬ್ಯಾರೇಜ್‌ನಲ್ಲಿ 80 ಸಾವಿರ ಕ್ಯುಸೆಕ್‌ಗೆ ಕುಸಿದ ಒಳಹರಿವು
  • 6 ಗೇಟ್‌ಗಳಿಂದ ನೀರು ಬಿಡುಗಡೆ
ರಬಕವಿ/ಬನಹಟ್ಟಿ: ಮಹಾರಾಷ್ಟ್ರ ಭಾಗದಲ್ಲಿ ಸುರಿದ ಭಾರೀ ಮಳೆ ಹಾಗೂ ಅಲ್ಲಿನ ಜಲಾಶಯಗಳಿಂದ ನೀರು ಬಿಡುಗಡೆಗೊಂಡ ಪರಿಣಾಮ ಕಳೆದ ಎರಡು ದಿನಗಳಿಂದ ಹಿಪ್ಪರಗಿ ಬ್ಯಾರೇಜ್‌ಗೆ 1.30 ಲಕ್ಷ ಕ್ಯುಸೆಕ್‌ವರೆಗೂ ತಲುಪಿದ್ದ ಒಳಹರಿವಿನ ಪ್ರಮಾಣ ಇದೀಗ ಗಣನೀಯವಾಗಿ ಇಳಿಮುಖವಾಗಿದೆ.
ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಕಳೆದ ಎರಡು ಮೂರು ದಿನಗಳಿಂದ ಕಡಿಮೆ ಮಳೆಯಾಗುತ್ತಿರುವುದರಿಂದ ಸೋಮವಾರ ಬೆಳಗ್ಗೆ ಬ್ಯಾರೇಜ್‌ಗೆ ಸುಮಾರು 80 ಸಾವಿರ ಕ್ಯುಸೆಕ್ ನೀರು ಮಾತ್ರ ಹರಿದು ಬರುತ್ತಿದ್ದು, ನದಿ ತೀರದ ಗ್ರಾಮಗಳ ಜನರು ಹಾಗೂ ರೈತರು ಪ್ರವಾಹ ಭೀತಿಯಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕುಲಹಳ್ಳಿ, ಹಿಪ್ಪರಗಿ, ಆಸಂಗಿ-ಅಸ್ಕಿ, ಮದನಮಟ್ಟಿ, ಸಸಾಲಟ್ಟಿ, ಹಳಿಂಗಳಿ, ತಮದಡ್ಡಿ ಸೇರಿ ಹಲವು ಗ್ರಾಮಗಳ ಕೃಷಿ ಜಮೀನುಗಳತ್ತ ನೀರು ನುಗ್ಗುವ ಆತಂಕ ಕಳೆದ ಎರಡು ದಿನಗಳಿಂದ ಮನೆ ಮಾಡಿತ್ತು. ಈಗ ನೀರಿನ ಹರಿವು ಕಡಿಮೆಯಾಗಿರುವುದರಿಂದ ರೈತರು ತಮ್ಮ ಕೃಷಿ ಚಟುವಟಿಕೆಗಳನ್ನು ಪುನರಾರಂಭಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಹಾರಾಷ್ಟ್ರ ಭಾಗದಲ್ಲಿ ಮಳೆಯ ತೀವ್ರತೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಹರಿದು ಬರುತ್ತಿರುವ ಕೃಷ್ಣಾ ನದಿಯ ನೀರಿನ ಪ್ರಮಾಣವೂ ಇಳಿಕೆಯಾಗಿದೆ. ಇದರ ಪರಿಣಾಮವಾಗಿ ಹಿಪ್ಪರಗಿ ಬ್ಯಾರೇಜ್‌ನಿಂದ ಒಳಹರಿವಿಗೆ ಅನುಗುಣವಾಗಿ ನೀರನ್ನು ಹೊರಬಿಡಲಾಗುತ್ತಿದೆ.
ಈ ಹಿಂದೆ ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾರೇಜ್‌ನ 21 ಗೇಟ್‌ಗಳ ಮೂಲಕ ನೀರನ್ನು ಬಿಡುಗಡೆ ಮಾಡಲಾಗುತ್ತಿತ್ತು. ಆದರೆ ಈಗ ಒಳಹರಿವು ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕೇವಲ 6 ಗೇಟ್‌ಗಳ ಮೂಲಕ ನೀರನ್ನು ಹೊರಹಾಕಲಾಗುತ್ತಿದೆ ಎಂದು ಬ್ಯಾರೇಜ್‌ನ ಅಧಿಕಾರಿಗಳು ತಿಳಿಸಿದ್ದಾರೆ.
ನೀರಿನ ಮಟ್ಟ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇರುವುದರಿಂದ ಸದ್ಯ ಪ್ರವಾಹದ ಆತಂಕ ತಗ್ಗಿದ್ದು, ನದಿ ತೀರದ ಜನರು ಹಾಗೂ ರೈತರು ನೆಮ್ಮದಿ ವಾತಾವರಣದಲ್ಲಿ ತಮ್ಮ ದೈನಂದಿನ ಚಟುವಟಿಕೆಗಳನ್ನು ಮುಂದುವರಿಸಿದ್ದಾರೆ.