ಆಲಮೇಲ ಪಟ್ಟಣದಲ್ಲಿ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ಶಾಸಕ ಅಶೋಕ ಮನಗೂಳಿ ನೆರವೇರಿಸಿದರು. ಪಪಂ ಅಧ್ಯಕ್ಷ ಸಾಧೀಕ ಸುಂಬಡ, ಮೋರಟಗಿಯ ಮಾಜಿ ಜಿಪಂ ಸದಸ್ಯ ನರಸಿಂಹಪ್ರಸಾದ ತಿವಾರಿ, ಗುತ್ತಿಗೆದಾರ ದಾವೂದ ಬೆಣ್ಣೆಶಿರೂರ ಮತ್ತಿತರರಿದ್ದರು. 
ರಾಜ್ಯ

ಅಧಿಕಾರವಧಿಯಲ್ಲಿ ಮಾಡುವ ಜನಪರ ಕೆಲಸಗಳು ಮುಖ್ಯ

ಮಾರುತಿ ತಳ್ಳಳ್ಳಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಅಶೋಕ ಮನಗೂಳಿ ಅಭಿಮತ
  • ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ
ಆಲಮೇಲ : ಅಧಿಕಾರ ಶಾಶ್ವತವಲ್ಲ, ರಾಜಕೀಯವಿರಲಿ, ವೃತ್ತಿ ಜೀವನವಿರಲಿ ಅಥವಾ ವೈಯಕ್ತಿಕ ಜೀವನವಿರಲಿ ಎಲ್ಲವೂ ತಾತ್ಕಾಲಿಕ, ಅಧಿಕಾರದಲ್ಲಿದ್ದಾಗ ಮಾಡುವ ಜನಪರ ಕೆಲಸಗಳೇ ಶಾಶ್ವತ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಬಸ್ ನಿಲ್ದಾಣ ಹತ್ತಿರ ಪಪಂ ವಾಣಿಜ್ಯ ಮಳಿಗೆಗಳ ಹಿಂದೆ ಭಾನುವಾರ 2025-26ನೇ ಸಾಲಿನ ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ 50 ಲಕ್ಷ ರೂ. ವೆಚ್ಚದ ಕಾಯಿಪಲ್ಲೆ ಮಾರುಕಟ್ಟೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಅಭಿವೃದ್ಧಿ ವಿಷಯ ಬಂದಾಗ ಪಕ್ಷ ಭೇದ ಮರೆತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಮಾತ್ರ ಪಟ್ಟಣ ಅಭಿವೃದ್ಧಿಯಾಗಲು ಸಾಧ್ಯ. ಅಧಿಕಾರದಲ್ಲಿದ್ದಾಗ ಅಭಿವೃದ್ಧಿ ಬಿಟ್ಟು ಕೇವಲ ರಾಜಕೀಯ ಮಾಡುವುದು, ಜನರಿಗೆ ಸುಳ್ಳು ಭರವಸೆಗಳನ್ನು ನೀಡುವುದು ನಮ್ಮ ಪುಸ್ತಕದಲ್ಲಿಯೇ ಇಲ್ಲಾ, ಚುನಾವಣೆ ಬಂದಾಗ ಒಂದು ತಿಂಗಳ ಮಾತ್ರ ರಾಜಕೀಯ ಮಾಡುವುದೇ ಹೊರತು, ಉಳಿದ 59 ತಿಂಗಳು ಕೇವಲ ಅಭಿವದ್ಧಿಗಾಗಿ ಶ್ರಮಿಸುವುದೇ ನಮ್ಮ
ಸಿದ್ಧಾಂತ ಎಂದರು.

ಪಟ್ಟಣದ ಅಭಿವದ್ಧಿಗಾಗಿ ಈಗಾಗಲೇ ಹತ್ತು ಹಲವು ಕಾಮಗಾರಿಗಳು ಪ್ರತಿಯಲ್ಲಿವೆ, ಅದರ ಜತೆಗೆ ಸದ್ಯ ಆಲಮೇಲ ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಸಿಂದಗಿ ರಸ್ತೆಯ ಐ.ಕೆ.ರಾಯಲ್ ಮ್ಯಾರೇಜ್ ಹಾಲ್ ವರೆಗೆ ಸುಮಾರು 5 ಕೋಟಿ ರೂ.ರಸ್ತೆ ಅಗಲೀಕರಣ ಹಾಗೂ ಬೀದಿದೀಪಗಳು, ಹಾಗೂ ಇಂಡಿ ರಸ್ತೆಯಿಂದ ಹಿರೇಮಠದವರೆಗೆ 1 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಹಾಗೂ 2 ಕೋಟಿ ರೂ. ಪಟ್ಟಣದ ಒಳಗೆ ಪ್ರವೇಶಿಸುವ ಎರಡು ಮುಖ್ಯ ರಸ್ತೆಗಳು ಹಾಗೂ ಪ್ರತಿ ವಾರ್ಡ್‌ಗಳಿಗೆ ಸಿಸಿ ರಸ್ತೆಗಳು ನಿರ್ಮಾಣಕ್ಕಾಗಿ

ಸುಮಾರು 25 ಲಕ್ಷ ರೂ. ಮೀಸಲಿಟ್ಟು ಒಟ್ಟು 10 ಕೋಟಿ ರೂ. ಕ್ರಿಯಾ ಯೋಜನೆಯನ್ನು ತಯಾರಿಸಿ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಮಂಜೂರಿ ಪಡೆದು ಕಾಮಗಾರಿ ಪ್ರಾರಂಭಿಸಲಾಗುವುದು, ಅದರ ಜತೆಗೆ ನೂತನ ತಾಲೂಕಿಗೆ ಉಪ ನೋಂದಣಿ ಕಚೇರಿಯ ಕುರಿತು ಸಾರ್ವಜನಿಕರು ಬೇಡಿಕೆ ಇಟ್ಟಿದ್ದಾರೆ, ಅದಕ್ಕಾಗಿ ನನ್ನ ಅಧಿಕಾರ ಅವಧಿಯಲ್ಲೇ ಉಪ ನೋಂದಣಿ ಕಚೇರಿ ನಿರ್ಮಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಮೋರಟಗಿ ಜಿಪಂ ಮಾಜಿ ಸದಸ್ಯ ನರಸಿಂಹಪ್ರಸಾದ ತಿವಾರಿ, ನಾಗರೀಕ ವೇದಿಕೆಯ ಅಧ್ಯಕ್ಷ ರಮೇಶ ಬಂಟನೂರ, ಪಪಂ ಅಧ್ಯಕ್ಷ ಸಾಧೀಕ ಸುಂಬಡ, ಮಾಜಿ ಪಪಂ ಅಧ್ಯಕ್ಷ ಹಣಮಂತ ಹೂಗಾರ, ಭಾಗ್ಯವಂತ ಆಲಮೇಲಕರ, ಶೌಕತ ಸುಂಬಡ, ಪ್ರಭು ವಾಲೀಕಾರ, ಬಸವರಾಜ ತೆಲ್ಲೂರ, ಮುನ್ನಾ ಚೌಧರಿ, ಮುರ್ತುಜ ಚೌಧರಿ ಮತ್ತಿತರರಿದ್ದರು.