ಮುಧೋಳದ ಸಿದ್ಧೇಶ್ವರ ಬ್ಯಾರೇಜ್ ಬಳಿ ಘಟಪ್ರಭಾ ನದಿಯ ನೀರಿನ ಮಟ್ಟವನ್ನು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಪರಿಶೀಲನೆ ಮಾಡಿದರು. ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಿಕ, ಪೌರಾಯುಕ್ತ ಗೋಪಾಲ ಖಾಸೆ ಇತರರಿದ್ದರು.
- ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮನವಿ
- ಘಟಪ್ರಭಾ ನದಿಯ ನೀರಿನ ಮಟ್ಟ ಖುದ್ದು ಪರಿಶೀಲನೆ
ಮುಧೋಳ: ಮಹಾರಾಷ್ಟ್ರ ಹಾಗೂ ಬೆಳಗಾವಿ ಭಾಗದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಘಟಪ್ರಭಾ ನದಿಯ ನೀರಿನ ಮಟ್ಟ ದಿನದಿಂದ ದಿನಕ್ಕೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ನದಿ ಪಾತ್ರದ ರೈತರು ಮತ್ತು ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಮಖಂಡಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ಮನವಿ ಮಾಡಿದ್ದಾರೆ.
ನಗರದ ಸಿದ್ಧೇಶ್ವರ ಬ್ಯಾರೇಜ್ ಬಳಿ ಬುಧವಾರ ಘಟಪ್ರಭಾ ನದಿಯ ಪ್ರಸ್ತುತ ನೀರಿನ ಮಟ್ಟವನ್ನು ಖುದ್ದು ಪರಿಶೀಲನೆ ಮಾಡಿ, ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ನದಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ನದಿ ತೀರದ ರೈತರು ತಮ್ಮ ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಮತ್ತು ನದಿ ಬಳಿ ಹೋಗದಂತೆ ಜಾಗ್ರತೆ ವಹಿಸಬೇಕು. ತುರ್ತು ಪರಿಸ್ಥಿತಿ ಉಂಟಾದಲ್ಲಿ ಕೂಡಲೇ ಸಂಬಂಧಿಸಿದ ತಾಲೂಕು ಆಡಳಿತ ಹಾಗೂ ಅಧಿಕಾರಿಗಳ ಸಹಕಾರ ಪಡೆಯಬೇಕು ಎಂದು ಸೂಚಿಸಿದರು.
ತಹಸೀಲ್ದಾರ್ ಡಾ. ಚಿಕ್ಕಪ್ಪ ನಾಯಿಕ, ಪೌರಾಯುಕ್ತ ಗೋಪಾಲ ಖಾಸೆ, ಪ್ರಕಾಶ ಕುಂದರಗಿ ಸೇರಿ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದು, ನದಿಯ ನೀರಿನ ಮಟ್ಟದ ಬಗ್ಗೆ ಮಾಹಿತಿ ಪಡೆದರು. ನದಿಪಾತ್ರದ ಗ್ರಾಮಗಳಲ್ಲಿ ಆಡಳಿತ ಹದ್ದಿನ ಕಣ್ಣಿಟ್ಟಿದ್ದು, ಅಗತ್ಯವಿದ್ದಲ್ಲಿ ತಕ್ಷಣವೇ ಸ್ಪಂದಿಸಲು ಸನ್ನದ್ಧವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.