Photo 
ರಾಜ್ಯ

ಚಂದ್ರು ಅಭಿನಯಕ್ಕೆ ಮನಸೋತ ಕಲಬುರಗಿ ಜನ

ಪ್ರಮುಖ ಮುಖ್ಯಾಂಶಗಳು

  • ಮುಖ್ಯಮಂತ್ರಿ' ನಾಟಕ ಪ್ರದರ್ಶನ
ಕಲಬುರಗಿ: ಕಲಬುರಗಿ ನಾಟಕೋತ್ಸವದ ಮೂರನೇ ದಿನವಾದ ಸೋಮವಾರ ನಗರದ ಡಾ.ಎಸ್.ಎಂ.ಪಂಡಿತ್‌ ರಂಗಮಂದಿರದಲ್ಲಿ ಪ್ರದರ್ಶನ ಕಂಡ ಬಿ.ವಿ. ರಾಜಾರಾಂ ನಿರ್ದೇಶನದ 'ಮುಖ್ಯಮಂತ್ರಿ' ನಾಟಕದಲ್ಲಿನ ಮುಖ್ಯಮಂತ್ರಿ ಪಾತ್ರದಲ್ಲಿನ ಮುಖ್ಯಮಂತ್ರಿ ಚಂದ್ರು ಅಭಿನಯಕ್ಕೆ ಕಲಬುರಗಿ ಜನ ಮನಸೋತರು.
ಬೆಂಗಳೂರಿನ ಕಲಾಗಂಗೋತ್ರಿ ತಂಡದಿಂದ ಮೂಡಿಬಂದ ಈ ನಾಟಕವು ಕಾಲ್ಪನಿಕ ಉದಯಚಲ ರಾಜ್ಯದ ರಾಜಕೀಯ ಸುತ್ತಾವರಿಸಿದೆ.  ಈ ನಾಟಕವು ಒಬ್ಬ ಚಾಣಾಕ್ಷ ಮತ್ತು ಕುತಂತ್ರಿ ಮುಖ್ಯಮಂತ್ರಿಯು ಚುನಾವಣೆಗೆ ಮುನ್ನ ತನ್ನ ಅಧಿಕಾರವನ್ನು ಉಳಿಸಿಕೊಳ್ಳಲು ನಡೆಸುವ ತೀವ್ರ ಹೋರಾಟವನ್ನು ಬಿಂಬಿಸುವ ತೀಕ್ಷ್ಣ ರಾಜಕೀಯ ವಿಡಂಬನೆಯಾಗಿದೆ. 

ಟಿ. ಎಸ್. ಲೋಹಿತಾಶ್ವ ಅವರ ರಚನೆಯ

120 ನಿಮಿಷಗಳ ಅವಧಿಯ ಈ ನಾಟಕದಲ್ಲಿ ಮುಖ್ಯಮಂತ್ರಿ ಪಾತ್ರದಲ್ಲಿ ಚಂದ್ರು ಅವರ ಸಂಭಾಷಣೆ, ಹಾಸ್ಯ ಚಟಾಕಿಗಳು, ಮೇರು ಅಭಿನಯವನ್ನು ಕಾಣಬಹುದಾಗಿದೆ. 895ನೇ ಪ್ರದರ್ಶನದಲ್ಲಿಯೂ ಮುಖ್ಯಮಂತ್ರಿ ಪಾತ್ರದಲ್ಲಿ ಚಂದ್ರು ಮುಂದುವರೆದಿದ್ದು, ಅವರ ರಂಗಾಭಿನಯಕ್ಕೆ ಹಿಡಿದ ಕನ್ನಡಿಯಾಗಿದೆ.
ಕಳೆದ 4 ದಶಕಗಳಿಂದ ಈ ನಾಟಕವು ಕನ್ನಡ ರಂಗಭೂಮಿಯಲ್ಲಿ ಒಂದು ಮೈಲಿಗಲ್ಲಾಗಿ ಮತ್ತು ಸಾರ್ವಕಾಲಿಕ ಜನಪ್ರಿಯ ಕೃತಿಯಾಗಿ ಗುರುತಿಸಿಕೊಂಡಿದೆ.
ಬದಲಾಗುವ ನಿಷ್ಠೆಗಳು ಮತ್ತು ಅವಕಾಶವಾದದ ಹಿನ್ನೆಲೆಯಲ್ಲಿ ಸಾಗುವ 'ಮುಖ್ಯಮಂತ್ರಿ' ನಾಟಕವು ಒಂದು ನದಿಯಂತೆ ನಿರಂತರವಾಗಿ ಹರಿಯುತ್ತಾ, ಅಧಿಕಾರದ ಬದಲಾಗದ ಸ್ವರೂಪಕ್ಕೆ ಕನ್ನಡಿ ಹಿಡಿಯುತ್ತದೆ. ಇದು ದುರಾಸೆ, ಕುತಂತ್ರ ಮತ್ತು ಅಸ್ತಿತ್ವಕ್ಕಾಗಿ ನಡೆಸುವ ನಿರಂತರ ಹೋರಾಟದ ಕಥೆಯಾಗಿದ್ದು, ಇಲ್ಲಿ ಮೌಲ್ಯ ಅಥವಾ ನೀತಿಗಿಂತ ಗೆಲುವೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ.
ಇನ್ನು ನಾಟಕದ ಕೊನೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿಗಳು ತಮ್ಮ ಮನೆಯಲ್ಲಿ ಪಕ್ಷದ ಅಧ್ಯಕ್ಷರೊಂದಿಗೆ ಚರ್ಚಿಸುವ ಸನ್ನಿವೇಶದಲ್ಲಿಯೇ ಕ್ಷಣಾವಧಿಗೆ ವಿದ್ಯುತ್ ಕೈ ಕೊಟ್ಟಿತ್ತು. ಇದನ್ನು  ಮುಖ್ಯಮಂತ್ರಿ ಚಂದ್ರು ಅವರು ಮುಖ್ಯಮಂತ್ರಿ ಮನೆಗೂ ಕರೆಂಟ್ ಹೊಗೋದು ತಪ್ಪಿಲ್ಲ ಎಂದು ತಮಾಷೆಯಲ್ಲಿ ತೆಗೆದುಕೊಂಡಾಗ ರಂಗಸಭೆಯು ನಗೆಯಲ್ಲಿ ತೇಲಾಡಿತು. ಸಂಭಾಷಣೆ ಮಧ್ಯೆ ಟಗರು-ಬಂಡೆ, ಹೌದು ಹುಲಿಯಾ ಪ್ರತಿಧ್ವನಿಸಿದ್ದು, ಪ್ರಸಕ್ತ ರಾಜಕೀಯ ಕಣ್ಮುಂದೆ ಬಂದಂಗಾಯಿತು.
ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಪೊಲೀಸ್ ಆಯುಕ್ತ ಡಾ.ಎಸ್.ಡಿ‌.ಶರಣಪ್ಪ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ, ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಸಾಹಿತ್ಯ ಅವರು ಸಹ ಕೊನೆವರೆಗಿದ್ದು ನಾಟಕ ವೀಕ್ಷಿಸಿದರು.
ಇನ್ನು ಫೆಬ್ರವರಿ 24 (ಮಂಗಳವಾರ) ಸಂಜೆ 7 ಗಂಟೆಗೆ ಆಶೀಷ್ ರಾಣಾ ನಿರ್ದೇಶನದ ಕೋರ್ಟ್ ಮಾರ್ಶಲ್ ಹಿಂದಿ ನಾಟಕ‌ ರಂಗಮಂದಿರದ‌ ಇದೇ ವೇದಿಕೆಯಲ್ಲಿಯೆ ಬೆಂಗಳೂರಿನ ಥಿಯೇಟರ್ನಾಮಾ ತಂಡ ಪ್ರಸ್ತುತಪಡಿಸಲಿದೆ.