ರಾಯಚೂರಿನ ಆಹಾರ ಮೇಳದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು. ಆಹಾರ ಮೇಳದಲ್ಲಿ ಐಸ್‌ಕ್ರೀಂ ಸವಿಯುತ್ತಿರುವ ಚಿಣ್ಣರು. 
ರಾಜ್ಯ

ರಾಯಚೂರು ಉತ್ಸವದ ಆಹಾರ ಮೇಳದಲ್ಲಿ ಘಮಘಮಿಸುವ ಖಾದ್ಯಗಳಿಗೆ ಮರುಳಾದ ಜನತೆ

ಪ್ರಮುಖ ಮುಖ್ಯಾಂಶಗಳು

  • ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಜೋರು
  • ಶುಚಿ-ರುಚಿ ಆಹಾರಕ್ಕೆ ಸ್ವಚ್ಛತೆಯ ಸಾಥ್
ರಾಯಚೂರು: ಜಿಲ್ಲಾ ಉತ್ಸವದ ಸಂಭ್ರಮಕ್ಕೆ ಈಗ ಆಹಾರದ ಘಮಲು ಹೊಸ ಮೆರುಗು ನೀಡಿದೆ. ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿರುವ ಆಹಾರ ಮೇಳ ಎರಡನೇ ದಿನವೂ ಜನರ ಅಭೂತಪೂರ್ವ ಸ್ಪಂದನೆಗೆ ಸಾಕ್ಷಿಯಾಯಿತು. ಶಾಲಾ ಮಕ್ಕಳ ಕಲರವ, ಯುವಜನರ ಉತ್ಸಾಹ ಹಾಗೂ ಕುಟುಂಬ ಸಮೇತರಾಗಿ ಬಂದ ಸಾರ್ವಜನಿಕರಿಂದ ಮೇಳದ ಆವರಣ ಕಿಕ್ಕಿರಿದು ತುಂಬಿತ್ತು.
ಬರೀ ರಾಯಚೂರಷ್ಟೇ ಅಲ್ಲದೆ ಚಿಕ್ಕಮಗಳೂರು, ಗದಗ, ಮೈಸೂರು, ಬಾಗಲಕೋಟೆ, ಬೆಳಗಾವಿ ಹಾಗೂ ಕಲಬುರಗಿ ಸೇರಿದಂತೆ ಒಟ್ಟು 12 ಜಿಲ್ಲೆಗಳಿಂದ ಆಗಮಿಸಿದ ಪರಿಣಿತ ಪಾಕತಜ್ಞರು ಇಲ್ಲಿನ 89 ಮಳಿಗೆಗಳಲ್ಲಿ ತಮ್ಮ ಭಾಗದ ವಿಶಿಷ್ಟ ಖಾದ್ಯಗಳನ್ನು ಪರಿಚಯಿಸಿದರು.
ಉತ್ತರ ಕರ್ನಾಟಕದ ಹೆಮ್ಮೆಯ ಮಂಡಾಳು ಒಗ್ಗರಣೆ, ಮಿರ್ಚಿ ಬಜ್ಜಿ, ಬದನೆಕಾಯಿ ಬಜ್ಜಿ ಹಾಗೂ ಸಂಡಿಗೆಗಳ ಮೊರೆತ ಒಂದೆಡೆಯಾದರೆ, ಫಾಸ್ಟ್ ಫುಡ್ ಪ್ರಿಯರಿಗಾಗಿ ಗೋಬಿ ಮಂಚೂರಿ, ನೂಡಲ್ಸ್ ಮತ್ತು ಪಾಪ್‌ಕಾರ್ನ್‌ಗಳ ಘಮಲು ಹರಡಿತ್ತು. ವಿವಿಧ ಹಣ್ಣುಗಳ ತಾಜಾ ಜ್ಯೂಸ್ ಹಾಗೂ ಆಂಧ್ರ ಶೈಲಿಯ ಸಿಹಿತಿಂಡಿಗಳು ಜನರ ನಾಲಿಗೆಯ ರುಚಿ ಹೆಚ್ಚಿಸಿದವು.

ಕರ್ತವ್ಯದ ನಡುವೆ ಕೌಟುಂಬಿಕ ಬಾಂಧವ್ಯ

ಸುಮಾರು ಎರಡು ದಶಕಗಳ ಸುದೀರ್ಘ ಕಾಯುವಿಕೆಯ ನಂತರ ಜಿಲ್ಲೆಯಲ್ಲಿ ಇಂತಹದೊಂದು ಬೃಹತ್ ಉತ್ಸವ ನಡೆಯುತ್ತಿರುವುದರಿಂದ ಪೊಲೀಸ್ ಇಲಾಖೆಯು ಬಿಗಿ ಬಂದೋಬಸ್ತ್ ಏರ್ಪಡಿಸಿದೆ. 500ಕ್ಕೂ ಅಧಿಕ ಸಿಬ್ಬಂದಿ ಜನದಟ್ಟಣೆ ನಿಯಂತ್ರಣದ ಜವಾಬ್ದಾರಿ ಹೊತ್ತಿದ್ದಾರೆ. ವಿಶೇಷವೆಂದರೆ,
ನಿರಂತರ ಕರ್ತವ್ಯದ ನಡುವೆಯೂ ಸಿಬ್ಬಂದಿ ತಮ್ಮ ಪಾಲಕರು ಹಾಗೂ ಹೆಂಡತಿ-ಮಕ್ಕಳನ್ನು ಮೇಳಕ್ಕೆ ಕರೆತಂದು, ಅವರೊಂದಿಗೆ ಆಹಾರ ಸವಿಯುವ ಮೂಲಕ ಸಂಭ್ರಮದ ಕ್ಷಣಗಳನ್ನು ಹಂಚಿಕೊಂಡರು. ಇದು ಕೇವಲ ಕರ್ತವ್ಯವಷ್ಟೇ ಅಲ್ಲ, ಕುಟುಂಬದೊಂದಿಗಿನ ಆತ್ಮೀಯತೆಗೂ ವೇದಿಕೆಯಾಯಿತು.

ಸಬಲೀಕರಣಕ್ಕೆ ಸಾಕ್ಷಿಯಾದ ಮಳಿಗೆಗಳು

ಫೆ.7ರವರೆಗೆ ನಡೆಯುವ ಈ ಮೇಳದಲ್ಲಿ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಇಲ್ಲಿನ ಒಟ್ಟು ಮಳಿಗೆಗಳ ಪೈಕಿ ಶೇ.60 ಮಳಿಗೆಗಳನ್ನು ಜಿಪಂ ಅಧೀನದ ಸ್ವಸಹಾಯ ಗುಂಪುಗಳಿಗೆ ನೀಡಲಾಗಿದೆ. ಸ್ಥಳೀಯವಾಗಿ ತಯಾರಿಸಿದ ಶುಚಿ-ರುಚಿಕರವಾದ ತಿಂಡಿಗಳಿಗೆ ಜನರು ಮರುಳಾಗಿದ್ದು, ಮೊದಲ ದಿನಕ್ಕಿಂತ ಎರಡನೇ ದಿನ ವ್ಯಾಪಾರ ವಹಿವಾಟು ಗಣನೀಯವಾಗಿ ವೃದ್ಧಿಸಿದೆ. ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮೂಡಿದೆ.

ಸಂಗೀತದ ರಸದೌತಣವೂ ಲಭ್ಯ

ಆಹಾರದ ಸವಿಯ ಜತೆಗೆ ಕಿವಿಗೆ ಇಂಪಾದ ಸಂಗೀತದ ರಸದೌತಣವೂ ಲಭ್ಯವಿತ್ತು. ಸ್ಥಳೀಯ ಕಲಾವಿದರು ಪ್ರಸ್ತುತಪಡಿಸಿದ ಕರೋಕೆ ಗೀತೆಗಳು ಮೇಳದ ಕಳೆಯನ್ನು ಹೆಚ್ಚಿಸಿದವು. ಕಲಾವಿದರ ಪ್ರತಿಭೆಗೆ ಸಾರ್ವಜನಿಕರು ಚಪ್ಪಾಳೆ ಹಾಗೂ ಶಿಳ್ಳೆಗಳ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದಿನ ಟ್ರೆಂಡ್‌ಗೆ ತಕ್ಕಂತೆ ಕಾಲೇಜು ವಿದ್ಯಾರ್ಥಿಗಳಿಗಾಗಿ ನಿರ್ಮಿಸಲಾದ ಸೆಲ್ಫಿ ಸ್ಟ್ಯಾಂಡ್‌ಗಳು ಆಕರ್ಷಣೀಯ ಕೇಂದ್ರಬಿಂದುಗಳಾಗಿದ್ದವು. ಇದರ ನಡುವೆ ನಗರ ಪಾಲಿಕೆಯು ಪರಿಸರ ಸ್ವಚ್ಛತೆಯನ್ನು ಅಚ್ಚುಕಟ್ಟಾಗಿ ಕಾಪಾಡಿರುವುದು ಮೇಳದ ಶಿಸ್ತಿಗೆ ಕನ್ನಡಿ ಹಿಡಿದಂತ್ತಿತ್ತು.

ಮೊದಲ ಬಾರಿಗೆ ಹಮ್ಮಿಕೊಂಡ ಆಹಾರ ಮೇಳದಲ್ಲಿ ಜನರ ಸ್ಪಂದನೆ ಉತ್ತಮವಾಗಿದೆ. ಮೊದಲ ದಿನಕ್ಕಿಂತ ಎರಡನೇ ದಿನ ವ್ಯಾಪಾರ ಉತ್ತಮವಾಗಿದೆ.