ವಿಜಯಪುರ ಹೋಬಳಿಯ ವೆಂಕಟಗಿರಿಕೋಟೆ ಕ್ರಾಸ್​ನಲ್ಲಿ ಸಾರಿಗೆ ಬಸ್ಸುಗಳು ನಿಲ್ಲಿಸದ ಕಾರಣ, ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಖಾಸಗಿ ಬಸ್​ಗಳಿಗೆ ಹತ್ತುತ್ತಿರುವುದು.  
ರಾಜ್ಯ

ಬಸ್​ ನಿಲ್ಲಸದೇ ಜನರ ಪರದಾಟ! / VIJAYAPUR

ವಿಜಯಪುರ : ಹೋಬಳಿಯ ವೆಂಕಟಗಿರಿಕೋಟೆ ಬಳಿಯಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್​ಆರ್​ಟಿಸಿ ಬಸ್ಸುಗಳು ನಿಲುಗಡೆಯಾಗದೆ ಶಾಲಾ ಕಾಲೇಜು ಮಕ್ಕಳಿಗೆ ಹಾಗೂ ನಾಗರಿಕರಿಗೆ ತೊಂದರೆಯಾಗುತ್ತಿದೆ ಎಂದು ಹೊಸಹುಡ್ಯ ಮುಖಂಡ ನರಸಿಂಹಮೂರ್ತಿ (ಭಾಷಾ) ಆರೋಪಿಸಿದ್ದಾರೆ.
ಚಿಕ್ಕಬಳ್ಳಾಪುರದಿಂದ ಬರುವ ಬಸ್ಸುಗಳು ವಿಜಯಪುರದ ಮೂಲಕ ದೇವನಹಳ್ಳಿ, ಯಲಹಂಕ, ಬೆಂಗಳೂರು ಸೇರಿ ಹಲವೆಡೆ ಹೋಗುವುದಕ್ಕಾಗಿ ಸುತ್ತಮುತ್ತಲಿನ ಊರುಗಳಿಂದ ನಿತ್ಯ ನೂರಾರು ಜನರು ವೆಂಕಟಗಿರಿಕೋಟೆ ಕ್ರಾಸ್​ಗೆ ಬರುತ್ತಾರೆ. ಆದರೆ, ಸಾರಿಗೆ ಬಸ್​ಗಳು ಇಲ್ಲಿ ನಿಲ್ಲಿಸುವುದಿಲ್ಲ. ಬಸ್ಸುಗಳಲ್ಲಿ ಪ್ರಯಾಣಿಕರ ಸಂಖ್ಯೆ ಜಾಸ್ತಿಯಿದೆ, ಖಾಲಿಯಿಲ್ಲ ಎಂದು ಹೊರಟು ಹೋಗುತ್ತಾರೆ. ಇದರಿಂದ ಪರೀಕ್ಷೆಗಳಿಗೆ ತೆರಳುವ, ನಿಗದಿತ ಸಮಯಕ್ಕೆ ಶಾಲಾ ಕಾಲೇಜುಗಳಿಗೆ ಹೋಗಲು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. 
ಈ ಕುರಿತು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿದರೆ ಯಾವ ಬಸ್ಸು ನಿಲ್ಲಿಸುವುದಿಲ್ಲವೋ ಅಂತಹ ಬಸ್​ ನಂಬರ್​ ಕಳುಹಿಸಿಕೊಡಿ ಎಂದು ಹೇಳುತ್ತಾರೆ. ನಂಬರ್​ ಬರೆದು ಕಳುಹಿಸಿದರೂ ಕಳೆದ 15 ದಿನಗಳಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಖಾಸಗಿ ಬಸ್ಸುಗಳ ಮೇಲೆ ಅವಲಂಬನೆ : ಬಸ್​ಗಳಲ್ಲಿ ಸೀಟುಗಳು ಖಾಲಿ ಇದ್ದರೂ, ಮಹಿಳೆಯರು ಹೆಚ್ಚಾಗಿರುವ ಕಾರಣ, ಬಸ್ಸುಗಳನ್ನು ನಿಲ್ಲಿಸದೇ ಹೋಗುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು, ಪ್ರಯಾಣಿಕರು, ಖಾಸಗಿ ಬಸ್​ಗಳನ್ನು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಅವ್ಯವಸ್ಥೆ ಸರಿಪಡಿಸದಿದ್ದರೆ, ರಾಷ್ಟ್ರೀಯ ಹೆದ್ದಾರಿಯಲ್ಲೇ ಬಸ್​ಗಳನ್ನು ತಡೆದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸ್ಥಳಿಯರು ಎಚ್ಚರಿಸಿದ್ದಾರೆ.