ಭಜನೆಯಿಂದ ಮನಸ್ಸಿಗೆ ನೆಮ್ಮದಿ bhajana
ಪಾತಪಾಳ್ಯ: ಭಜನೆ ಮಾಡುವುದರಿಂದ ಆಧ್ಯಾತ್ಮಿಕ ಚಿಂತನೆ ಹೆಚ್ಚುತ್ತದೆ. ಮನಸ್ಸಿಗೆ ನೆಮ್ಮದಿಯೂ ದೊರೆಯುತ್ತದೆ ಎಂದು ಶ್ರೀರಾಮ ಭಜನೆ ಮಂಡಳಿ ಅಧ್ಯಕ್ಷ ಅಪ್ಪಿನಾಯ್ಡು ತಿಳಿಸಿದರು. bhajana
ಬಾಗೇಪಲ್ಲಿ ತಾಲೂಕಿನ ಸೋಮನಾಥಪುರದಲ್ಲಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಭಜನೆ ಕಾರ್ಯಕ್ರಮದಲ್ಲಿ ಮಾತನಾಡಿ, ಮೊಬೈಲ್ ಯುಗದಲ್ಲಿ ಭಜನೆ ಮರೆಯಾಗುತ್ತಿದೆ. ಭಜನೆ ಮಾಡುವುದರಿಂದ ಆರೋಗ್ಯ ವೃದ್ಧಿಯಾಗುವುದರ ಜತೆಗೆ ಸಹಕಾರ ಮನೋಭಾವ ಬೆಳೆಯುತ್ತದೆ. ಇದರ ಬಗ್ಗೆ ನಗರ ಪ್ರದೇಶದ ಮಕ್ಕಳಿಗೆ ತಿಳಿಸಿ ಎಂದರು.
ಶ್ರೀರಾಮ ಭಜನೆ ಮಂಡಳಿ ಸದಸ್ಯ ರಾಮಾಂಜನೇಯಲು ಮಾತನಾಡಿ, ಭಜನೆ ಹಿರಿಯರು ನಮಗೆ ಬಿಟ್ಟು ಕೊಟ್ಟ ಬಳುವಳಿಯಾಗಿದೆ. ಅವರು ತೋರಿದ ದಾರಿಯಲ್ಲಿ ನಾವು ನಡೆಯಬೇಕು. ದಿನಕ್ಕೆ ಅರ್ಧ ತಾಸು ಭಜನೆ ಮಾಡಿವುದರಿಂದ ಆತ್ಮಸಾಕ್ಷಾತ್ಕಾರ ಪಡೆಯಬಹುದು ಎಂದರು.
ಕುರ್ರಪಲ್ಲಿ ಶ್ರೀ ಯೋಗಿ ನಾರೇಯಣ ಭಜನಾ ಮಂಡಳಿ ಅಧ್ಯಕ್ಷ ಬಯಪ್ಪಸ್ವಾಮಿ ಮಾತನಾಡಿ, ಮನುಷ್ಯನನ್ನು ಸನ್ಮಾರ್ಗದಲ್ಲಿ ನಡೆಸಿ ಸುಂದರಗೊಳಿಸುವ ಭಜನಾ ಪರಂಪರೆಯು ಬೆಳೆಯಬೇಕು. ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಪ್ರತಿದಿನ ದೇವರ ಜಪ ಮಾಡುವುದರಿಂದ ಒತ್ತಡಗಳಿಂದ ಮುಕ್ತರಾಗಬಹುದು ಎಂದರು.
ಹಾರ್ಮೊನಿಂ ವಾದಕ ತಿಪ್ಪಯ್ಯ, ರಾಮಾಂಜನೇಯಲು, ಚಿನ್ನ ಬೈಯಪ್ಪ, ವೆಂಕಟರೆಡ್ಡಿ, ಭಜನಾ ಮಂಡಳಿ ಸದಸ್ಯರಿದ್ದರು.